ಬ್ಯಾಂಕಾಕ್, ಸೆ. 11 (DaijiworldNews/TA): ಥಾಯ್ಲೆಂಡ್ ಪ್ರವಾಸಕ್ಕೆ ತೆರಳಲು ಸಿದ್ಧತೆ ನಡೆಸಿರುವ ಭಾರತೀಯ ಪ್ರಯಾಣಿಕರು ಕೆಲ ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಗಮನಿಸಬೇಕಿದೆ. ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಥಾಯ್ಲೆಂಡ್ಗೆ ಪ್ರಯಾಣಿಸುವ ಭಾರತೀಯರಿಗಾಗಿ ಪರಿಷ್ಕೃತ ಪ್ರಯಾಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಯಂತೆ, ಪ್ರಯಾಣಿಕರು ಕನಿಷ್ಠ ಆರು ತಿಂಗಳ ಮಾನ್ಯತೆ ಹೊಂದಿರುವ ಪಾಸ್ಪೋರ್ಟ್, ಡಿಜಿಟಲ್ ಅರೈವಲ್ ಕಾರ್ಡ್, ಖಚಿತಪಡಿಸಿದ ರಿಟರ್ನ್ ಫ್ಲೈಟ್ ಟಿಕೆಟ್, ಹೋಟೆಲ್ ಬುಕಿಂಗ್ ಹಾಗೂ ಪ್ರಯಾಣದ ವಿವರಗಳನ್ನು ಹೊಂದಿರಬೇಕು. ಇದರ ಜೊತೆಗೆ, ಪ್ರತಿ ಪ್ರಯಾಣಿಕರು 20,000 ಥಾಯ್ ಬಾಟ್ (ಸುಮಾರು ರೂ. 58,000)ನಗದು ಹೊಂದಿರುವಂತೆ ಸೂಚಿಸಲಾಗಿದೆ.
ಕುಟುಂಬ ಅಥವಾ ಗುಂಪಿನಲ್ಲಿ ಥಾಯ್ಲೆಂಡ್ಗೆ ಪ್ರಯಾಣಿಸುವವರು ಇಮಿಗ್ರೇಷನ್ ತಪಾಸಣೆ ವೇಳೆ ಅಗತ್ಯ ದಾಖಲೆಗಳನ್ನು ವೈಯಕ್ತಿಕವಾಗಿ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಒಬ್ಬರ ಬಳಿ ಮಾತ್ರ ಎಲ್ಲಾ ದಾಖಲೆಗಳಿರುವ ಬದಲು, ಪ್ರತಿಯೊಬ್ಬ ಪ್ರಯಾಣಿಕರೂ ತಮ್ಮ ಅಗತ್ಯ ದಾಖಲೆಗಳನ್ನು ಹೊಂದಿರುವುದು ಸೂಕ್ತವಾಗಿದೆ.
ವ್ಯಾಪಾರ ಉದ್ದೇಶದಿಂದ ಥಾಯ್ಲೆಂಡ್ಗೆ ತೆರಳುವವರು ಪ್ರವಾಸಿ ಪ್ರವೇಶ ನಿಯಮವನ್ನು ಬಳಸಬಾರದು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಬದಲಾಗಿ ತಮ್ಮ ಉದ್ದೇಶಕ್ಕೆ ಅನುಗುಣವಾದ ಮಾನ್ಯ ವರ್ಕ್ ವೀಸಾ ಅಥವಾ ಅಗತ್ಯ ಅನುಮತಿ ಹೊಂದಿರಬೇಕು. ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತೀಯರು ಪ್ರಯಾಣಕ್ಕೂ ಮುನ್ನ ಪಾಸ್ಪೋರ್ಟ್, ವೀಸಾ, ವಸತಿ ಹಾಗೂ ವಾಪಸ್ ಪ್ರಯಾಣದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹೊಸ ಮಾರ್ಗಸೂಚಿಗಳ ಉದ್ದೇಶ ಇಮಿಗ್ರೇಷನ್ ಪ್ರಕ್ರಿಯೆ ವೇಳೆ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಿ, ಭಾರತೀಯ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸುವುದಾಗಿದೆ.