ವಾಷಿಂಗ್ಟನ್, ಸೆ. 08 (DaijiworldNews/AK): ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷದಲ್ಲಿ ಅಮೆರಿಕ ವಿಜಯ ಸಾಧಿಸಿದ ತಕ್ಷಣ ಜಾಗತಿಕ ಇಂಧನ ಮಾರುಕಟ್ಟೆಗಳು ವೇಗವಾಗಿ ಸಹಜ ಸ್ಥಿತಿಗೆ ಮರಳಲಿದ್ದು, ಅಮೆರಿಕದಲ್ಲಿ ಪೆಟ್ರೋಲ್ ದರ ಪ್ರತಿ ಗ್ಯಾಲನ್ಗೆ 2 ಡಾಲರ್ಗಿಂತ ಕಡಿಮೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಡಿದಿದ್ದಾರೆ.

ಹಾರ್ಮುಜ್ ಜಲಸಂಧಿಯ ಸುತ್ತ ಉಭಯ ದೇಶಗಳ ನಡುವಿನ ಸೇನಾ ಮುಖಾಮುಖಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ಇರಾನ್ ವಿರುದ್ಧದ ಸಂಘರ್ಷ ಮುಗಿದ ಬಳಿಕ ತೈಲ ಬೆಲೆಗಳು ತೀವ್ರವಾಗಿ ಇಳಿಯಲಿವೆ. ಆರಂಭದಲ್ಲಿ ಗ್ಯಾಲನ್ಗೆ 3 ಡಾಲರ್, ನಂತರ 2 ಡಾಲರ್ಗಿಂತಲೂ ಕಡಿಮೆಯಾಗಲಿದೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಜಾಗತಿಕ ಬ್ರೆಂಟ್ ಕಚ್ಚಾ ತೈಲ ದರ 6 ವಾರಗಳ ಗರಿಷ್ಠ ಮಟ್ಟವಾದ ಬ್ಯಾರೆಲ್ಗೆ 97 ಡಾಲರ್ಗೆ ತಲುಪಿದ್ದು, ಕೇವಲ ಒಂದು ತಿಂಗಳಲ್ಲಿ ಶೇ. 19 ರಷ್ಟು ಏರಿಕೆಯಾಗಿದೆ.
ಇತ್ತೀಚೆಗೆ ಯುಎಸ್ ನೌಕಾಪಡೆಯ ಯುದ್ಧನೌಕೆಗಳ ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿದ ಬಳಿಕ ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರತಿದಾಳಿ ನಡೆಸಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ಗೆ ಸೇರಿದ ಎಂಟಿ ಡೌನಿ, ಎಂಟಿ ಸ್ಟಾರ್ಕ್ 1 ಹಾಗೂ ಎಂಟಿ ಕೈಲೋ ಎಂಬ ಮೂರು ಕಚ್ಚಾ ತೈಲ ಸಾಗಣೆ ನೌಕೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಿ ನಾಶಪಡಿಸಿದೆ.