ಮಾಸ್ಕೋ, ಸೆ. 07 (DaijiworldNews/TA):ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ. ಸಂಕಷ್ಟದಲ್ಲಿರುವ ಪತಿ ಟೆಕ್ಕಿ ಚಂದನ್ ಗುಪ್ತಾಗೆ ಸಹಾಯ ಮಾಡುವಂತೆ ಪತ್ನಿ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಪತ್ನಿ ಸ್ನೇಹ ಗುಪ್ತಾ ಈ ಕುರಿತು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನನ್ನ ಪತಿ ನೋಯ್ಡಾದ ಸೆಕ್ಟರ್ 62ರಲ್ಲಿರುವ ಭಾರತೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದನ್ ಎಂಜಿನಿಯರ್ ಆಗಿದ್ದು, ಕಂಪನಿಯ ಮೂಲಕ ರಷ್ಯಾಕ್ಕೆ ಪ್ರಯಾಣಿಸಿದ ಬಳಿಕ ಹೈಕ್ವಾಲಿಫೈಡ್ ವೀಸಾ ಪಡೆದು ರಷ್ಯಾದಲ್ಲಿ ವಾಸಿಸುತ್ತಿದ್ದೇವೆ.
ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಜೀ ಅವರಲ್ಲಿ ನಾನು ಮನವಿ ಮಾಡುತ್ತೇನೆ. ಇಲ್ಲಿನ ಪೊಲೀಸರು ನನ್ನ ಪತಿಯನ್ನು ರಾತ್ರಿ 12:30ರ ಸುಮಾರಿಗೆ ಕರೆದುಕೊಂಡು ಹೋಗಿದ್ದಾರೆ. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ಆದರೂ, ಪೊಲೀಸರು ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ನನ್ನ ಪತಿಯನ್ನ ಬಿಡುಗಡೆ ಮಾಡುತ್ತಿಲ್ಲ. ನನಗೆ ಮಾಸ್ಕೋದ ಸ್ಥಳೀಯ ಭಾಷೆ ಬರುವುದಿಲ್ಲ. ನಾನು ನನ್ನ 10 ವರ್ಷದ ಮಗು ಇಲ್ಲಿ ಒಂಟಿಯಾಗಿದ್ದೇವೆ ನಮಗೆ ಸಹಾಯ ಮಾಡಿʼʼ ಎಂದು ಮನವಿ ಮಾಡಿದ್ದಾರೆ .
ವಿಡಿಯೋದಲ್ಲಿ ಮುಖ್ಯವಾಗಿ ಹಂಚಿಕೊಂಡ ಅವರು ರಷ್ಯಾದಲ್ಲಿ ಜನರನ್ನು ಬಲವಂತವಾಗಿ ಸೈನ್ಯಕ್ಕೆ ಕಳುಹಿಸಲಾಗುತ್ತಿದೆ. ಸೈನ್ಯದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಜನರನ್ನು ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಕುರಿತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯಿಸಿದ್ದು, ಇದು ಕಾನೂನು ವಿಷಯವಾಗಿದೆ. ರಷ್ಯಾ ಸರ್ಕಾರ ಪ್ರಕರಣವನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ. ರಾಯಭಾರ ಕಚೇರಿಯು ಕಾನ್ಸುಲರ್ ಪ್ರವೇಶವನ್ನು ಕೋರಿರುವುದಾಗಿ ಕೂಡ ದೃಢಪಡಿಸಿದೆ.