ವಾಷಿಂಗ್ಟನ್, ಸೆ. 07 (DaijiworldNews/TA): ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಮೆಜಾನ್ ಪ್ರೈಮ್ ಏರ್ಗೆ ಸೇರಿದ ಕಾರ್ಗೋ ಜೆಟ್ವೊಂದು ರನ್ವೇಯಿಂದ ಜಾರಿ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಬೋಯಿಂಗ್ 767-300 ವಿಮಾನ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಈ ವೇಳೆ ವಿಮಾನ ರನ್ವೇಯಿಂದ ಜಾರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದ ತಕ್ಷಣವೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ, ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಅಪಘಾತದ ವೇಳೆ ದಟ್ಟ ಹೊಗೆ ಆವರಿಸಿಕೊಂಡಿದ್ದು, ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಕಾರ್ಗೋ ವಿಮಾನವು ಪೋರ್ಟೊ ರಿಕೊದ ಸ್ಯಾನ್ ಜುವಾನ್ನಿಂದ ಮಿಯಾಮಿಗೆ ಆಗಮಿಸಿತ್ತು. ಅಪಘಾತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಎಲ್ಲಾ ರನ್ವೇಗಳು ಹಾಗೂ ಟ್ಯಾಕ್ಸಿವೇಗಳನ್ನು ಕೆಲಕಾಲ ಮುಚ್ಚಲಾಗಿತ್ತು. ಘಟನೆಯ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸುವುದಾಗಿ ತಿಳಿಸಿದೆ. ಮತ್ತೊಂದೆಡೆ, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಕೂಡ ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ವಿಮಾನ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ತನಿಖೆ ಮುಂದುವರಿದಿದೆ.