ಲಾ ಪಾಜ್, ಸೆ. 05 (DaijiworldNews/AA): ಬೊಲಿವಿಯಾದ ಸೇನಾ ನೆಲೆಯಲ್ಲಿ ಸ್ಫೋಟ ಸಂಭವಿಸಿದ್ದು, 10 ರಿಂದ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದು, 7 ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ನೆಲೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ನಡೆದ ಸ್ಥಳದಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಲಾ ಪಾಜ್ನಿಂದ ಸುಮಾರು 30 ಕಿಮೀ ದೂರದಲ್ಲಿರುವ ವಿಯಾಚಾದಲ್ಲಿರುವ ಸೇನಾ ಸಂಕೀರ್ಣದಲ್ಲಿ ಶುಕ್ರವಾರ ಸ್ಥಳೀಯ ಸಮಯ ಮಧ್ಯಾಹ್ನ 2:30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟವು ಪೈರೋಟೆಕ್ನಿಕ್ (ಮಿಲಿಟರಿ ಸಿಗ್ನಲ್) ವಸ್ತುಗಳನ್ನು ಸಂಗ್ರಹಿಸಲಾಗಿದ್ದ ಪ್ರದೇಶದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಫೋಟ ಸಂಭವಿಸಿದ ಸುತ್ತಮುತ್ತಲಿನ ಪ್ರದೇಶಗಳ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ. ಸ್ಫೋಟದ ತೀವ್ರತೆಗೆ ಕಿಟಕಿಗಳು ಒಡೆದುಹೋಗಿವೆ.
ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮತ್ತೊಂದು ಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ನಿವಾಸಿಗಳನ್ನು ಸ್ಥಳದಿಂದ ಕನಿಷ್ಠ 150 ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.