ಕೈವ್, ಸೆ. 04 (DaijiworldNews/AA): ರಷ್ಯಾದಿಂದ ತೈಲ ಅಥವಾ ಖನಿಜಗಳನ್ನು ಖರೀದಿಸುವುದನ್ನು ನಿಲ್ಲಿಸಿದ ತಕ್ಷಣವೇ ಉಕ್ರೇನ್ ಯುದ್ಧ ಬಗೆಹರಿಯುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.

ಉಕ್ರೇನ್ ರಾಜಧಾನಿ ಕೈವ್ಗೆ ಅಧಿಕೃತ ಭೇಟಿ ನೀಡಿದ ವೇಳೆ ಈ ಕುರಿತು ಮಾತನಾಡಿದ ಅವರು, "ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಯುದ್ಧವನ್ನು ಯಾರೋ ಒಬ್ಬರು ತೈಲ, ರಸಗೊಬ್ಬರ, ಅಥವಾ ಲೋಹಗಳನ್ನು ಖರೀದಿಸುವುದರಿಂದ ಅಥವಾ ಬಿಡುವುದರಿಂದ ಪರಿಹರಿಸಲು ಸಾಧ್ಯವಿಲ್ಲ. ಶಾಂತಿ ನೆಲೆಸಬೇಕಾದರೆ ನೇರ ಸಂವಾದ, ರಾಜತಾಂತ್ರಿಕತೆ ಮತ್ತು ಮಾತುಕತೆಗಳೇ ಏಕೈಕ ಮಾರ್ಗ" ಎಂದಿದ್ದಾರೆ.
"ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅನಿಶ್ಚಿತವಾಗಿರುವಾಗ, ಭಾರತದ 140 ಕೋಟಿ ನಾಗರಿಕರ ಇಂಧನ ಅಗತ್ಯವನ್ನು ಪೂರೈಸುವುದು ಸರ್ಕಾರದ ಪ್ರಮುಖ ಹೊಣೆಗಾರಿಕೆ. ಈ ವಿಚಾರದಲ್ಲಿ ಉಕ್ರೇನ್ ತನ್ನದೇ ಆದ ನಿಲುವು ಹೊಂದಿರುವಂತೆ, ಭಾರತದ ಹಿತಾಸಕ್ತಿ ಮತ್ತು ದೃಷ್ಟಿಕೋನವನ್ನೂ ಜಗತ್ತು ಗೌರವಿಸಬೇಕು" ಎಂದು ಹೇಳಿದ್ದಾರೆ.