ನವದೆಹಲಿ, ಸೆ. 03 (DaijiworldNews/AA): ಇರಾನ್ ದೇಶವು ಅಮೆರಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಹಾಗೂ ಆದಾಯ ಗಳಿಸಲು ಯಾವುದೇ ದೇಶ ಸಹಾಯ ಮಾಡಬಾರದು ಇತರ ದೇಶಗಳಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಎಚ್ಚರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರುಬಿಯೋ, "ಭಾರತವು ಇರಾನ್ನೊಂದಿಗೆ ಹೊಸ ವ್ಯಾಪಾರ ಒಪ್ಪಂದ ಸ್ಥಾಪಿಸಲು ಮುಂದಾಗಿದೆಯೇ ಎಂಬ ಪ್ರಶ್ನೆಗೂ ಅವರು ಉತ್ತರಿಸಿ, ಭಾರತ ಮತ್ತು ಇರಾನ್ ನಡುವೆ ಯಾವುದೇ ವ್ಯಾಪಾರ ಒಪ್ಪಂದವಿದೆ ಎಂದು ನಾನು ಭಾವಿಸಲ್ಲ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿದೇಶಾಂಗ ನೀತಿ ರೂಪಿಸಿಕೊಳ್ಳುವ ಮತ್ತು ಇರಾನ್ನೊಂದಿಗೆ ಸಂಬಂಧ ಹೊಂದುವ ಹಕ್ಕಿದೆ. ಆದ್ರೆ ಇರಾನ್ ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ದೇಶ ಬೆಂಬಲ ನೀಡಬಾರದು" ಎಂದಿದ್ದಾರೆ.
"ಟ್ರಂಪ್ ಆಡಳಿತವು ಇರಾನ್ ವಿರುದ್ಧದ ಆರ್ಥಿಕ ನಿರ್ಬಂಧವನ್ನು ಈಗ ಮತ್ತಷ್ಟು ತೀವ್ರಗೊಳಿಸಿದೆ. ಇರಾನ್ನೊಂದಿಗೆ ವ್ಯಾಪಾರ ನಡೆಸುವುದನ್ನ ಮುಂದುವರಿಸುವ ದೇಶಗಳು ಮತ್ತು ಕಂಪನಿಗಳ ವಿರುದ್ಧವೂ ದ್ವಿತೀಯ ಹಂತದ ನಿರ್ಬಂಧಗಳು ಜಾರಿಯಾಗಬಹುದು. ವಿಶ್ವದ ಹಲವು ದೇಶಗಳು ಇರಾನ್ನೊಂದಿಗೆ ಸಂಪರ್ಕ ಹೊಂದಿರುವುದು ಅಮೆರಿಕಕ್ಕೆ ತಿಳಿದಿದೆ. ಈ ಹಿಂದೆ ಅಮೆರಿಕವೂ ಇರಾನ್ ಆಡಳಿತದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ. ಇಂತಹ ಕೆಲವು ಚರ್ಚೆಗಳ ಸಂದರ್ಭದಲ್ಲಿ ನಾವು ಕೂಡ ಇರಾನ್ ಆಡಳಿತದ ಪ್ರತಿನಿಧಿಗಳೊಂದಿಗೆ ಭೇಟಿಯಾಗಿದ್ದೇವೆ ಮತ್ತು ಸಂಪರ್ಕದಲ್ಲಿದ್ದೇವೆ. ಆದರೆ, ಇರಾನ್ ಅಮೆರಿಕದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಅಥವಾ ಆದಾಯ ಗಳಿಸಲು ಸಹಾಯ ಮಾಡುವ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸುವ ವಿಷಯದಲ್ಲಿ ಅಮೆರಿಕ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
"ಅಂತಿಮವಾಗಿ ಏನಾಗುತ್ತದೆ ಎಂಬುದರಲ್ಲಿ ಟ್ರಂಪ್ ಬಹಳ ಸ್ಪಷ್ಟವಾಗಿದ್ದಾರೆ. ಯಾವುದೇ ದೇಶವೂ ಇರಾನ್ಗೆ ಸಹಾಯ ಮಾಡಬಾರದು. ಇರಾನ್ ಆದಾಯ ಗಳಿಸಲು ಮಾರ್ಗಗಳನ್ನ ಸೃಷ್ಟಿಸುವ ಮೂಲಕ ಯಾವುದೇ ದೇಶವೂ ಅವರಿಗೆ ನೆರವಾಗಬಾರದು. ಆ ಆದಾಯವನ್ನು ಅವರು ಭಯೋತ್ಪಾದನೆಗೆ ಬೆಂಬಲ ನೀಡಲು ಮತ್ತು ಪರಮಾಣು ಶಸ್ತ್ರಾಸ್ತ್ರ ನಿರ್ಮಿಸಲು ಬಳಸಬಹುದು. ದೇಶಗಳು ಹಾಗೆ ಮಾಡಲು ನಿರ್ಧರಿಸಿದರೆ, ನಾವು ಅವರ ಮೇಲೂ ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.