ಕಠ್ಮಂಡು, ಸೆ. 02 (DaijiworldNews/AA): ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಇದುವರೆಗೆ 1,127 ಮೃತಪಟ್ಟಿದ್ದಾರೆ. ಆದರೆ 'ನಮಗೆ ನೀವು ನೀಡುವ ಮಾನವೀಯ ನೆರವು ಅಥವಾ ದಾನ ಬೇಡ. ನಮ್ಮ ದೇಶಕ್ಕಾದ ಭಾರಿ ವಿನಾಶಕ್ಕೆ ಸೂಕ್ತ ಪರಿಹಾರ ನೀಡಿ' ಎಂದು ನೇಪಾಳ ಸರ್ಕಾರ ಭಾರತ, ಚೀನಾ ಮತ್ತು ಅಮೆರಿಕ ದೇಶಗಳಿಗೆ ಆಗ್ರಹಿಸಿದೆ.

ಕಾರ್ಬನ್ ಹೊರಸೂಸುವಿಕೆಯಲ್ಲಿ ನೇಪಾಳದ ಪಾತ್ರ ತೀರಾ ನಗಣ್ಯ. ಆದರೆ ಭಾರತ, ಚೀನಾ ಮತ್ತು ಅಮೆರಿಕದಂತಹ ದೊಡ್ಡ ಕೈಗಾರಿಕಾ ದೇಶಗಳು ಮಾಡುವ ಮಾಲಿನ್ಯದಿಂದಾಗಿ ಹಿಮಾಲಯ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ, ಉಷ್ಣಾಂಶ ಏರಿಕೆಯಿಂದ ಹಿಮನದಿಗಳು ಕರಗಿ ಈ ರೀತಿಯ ಭೀಕರ ಪ್ರವಾಹ ಉಂಟಾಗುತ್ತಿದೆ ಎಂದು ನೇಪಾಳ ಆರೋಪಿಸಿದೆ.
ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಶ್ರೀಮಂತ ಮತ್ತು ಕೈಗಾರಿಕಾ ರಾಷ್ಟ್ರಗಳು, ಅದರ ಪರಿಣಾಮವನ್ನು ಅನುಭವಿಸುತ್ತಿರುವ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂಬ ಅಂತಾರಾಷ್ಟ್ರೀಯ ಹವಾಮಾನ ಒಪ್ಪಂದವನ್ನು ನೇಪಾಳ ಉಲ್ಲೇಖಿಸಿದೆ.
"ಪ್ರವಾಹ ಬಂದಾಗ ಕೆಲವೇ ಕೆಲವು ಟನ್ ಪರಿಹಾರ ಸಾಮಗ್ರಿ ಅಥವಾ ಆಹಾರ ಧಾನ್ಯ ಕಳುಹಿಸುವುದು ಶಾಶ್ವತ ಪರಿಹಾರವಲ್ಲ. ನಮ್ಮ ಮೂಲಸೌಕರ್ಯ, ಹಿಮನದಿಗಳು ಮತ್ತು ಜೀವಹಾನಿಗೆ ಈ ಪ್ರಮುಖ ಮಾಲಿನ್ಯಕಾರಕ ದೇಶಗಳೇ ನೇರ ಹೊಣೆ ಹೊತ್ತು ನಷ್ಟಭರ್ತಿ ಪಾವತಿಸಬೇಕು" ಎಂದು ನೇಪಾಳ ತಿಳಿಸಿದೆ.