ಟೆಹ್ರಾನ್, ಸೆ. 02 (DaijiworldNews/AK):ಅಮೆರಿಕ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಬೆನ್ನಲ್ಲೇ ಇರಾನ್ ಅಮೆರಿಕಕ್ಕೆ ತೀವ್ರ ಎಚ್ಚರಿಕೆ ನೀಡಿದೆ.

ದಕ್ಷಿಣ ಇರಾನ್ನ ಹೋರ್ಮೋಜ್ಗಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದಕ್ಕೆ ಕ್ಷಿಪಣಿಯ ಚೂರುಗಳು ಅಪ್ಪಳಿಸಿದೆ. ಘಟನೆಯಲ್ಲಿ ಒಂದು ಮಗು ಸೇರಿ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಅಮೆರಿಕಕ್ಕೆ ಇರಾನ್ ಕಟು ಎಚ್ಚರಿಕೆ ನೀಡಿದ್ದು, ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಹೇಳಿದೆ.
ಇರಾನ್ ರೆಡ್ ಕ್ರೆಸೆಂಟ್ ಹೇಳಿಕೆ ಪ್ರಕಾರ, ಸಿರಿಕ್ ಕೌಂಟಿಯ ಕುಹೆಸ್ತಕ್ ನಗರದಲ್ಲಿರುವ ವಸತಿ ಮನೆಯೊಂದರ ಮೇಲೆ ಅಮೆರಿಕದ ಕ್ಷಿಪಣಿಯ ಚೂರುಗಳು ಬಿದ್ದಿವೆ. ದಾಳಿ ನಡೆದ ವೇಳೆ ಮನೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿರುವ ಹಾರ್ಮುಜ್ ಜಲಸಂಧಿ ಸಮೀಪದಲ್ಲೇ ಸಿರಿಕ್ ಕೌಂಟಿ ಇದೆ. ಜಾಗತಿಕ ಸಮುದ್ರ ಮಾರ್ಗದಲ್ಲಿ ಪ್ರಮುಖ ಪಾತ್ರ ವಹಿಸುವ ಜಲಸಂಧಿಯ ಬಳಿ ಈ ಘಟನೆ ನಡೆದಿದೆ.
ಅಮೆರಿಕದ ದಾಳಿಗೆ ಪ್ರತಿಕ್ರಿಯಿಸಿರುವ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಇರಾನ್ನ ಪ್ರೀತಿಯ ಜನತೆ ಮತ್ತು ಪ್ರತಿರೋಧದ ಮುಂಚೂಣಿ ಪಡೆಗಳು ಅಮೆರಿಕದ ಶತ್ರುವಿಗೆ ಮರೆಯಲಾಗದ ಪಾಠಗಳನ್ನು ಕಲಿಸಲಿವೆ ಎಂದು ಎಚ್ಚರಿಸಿದ್ದಾರೆ.