ವಾಷಿಂಗ್ಟನ್, ಆ. 31 (DaijiworldNews/AA): ನೇಪಾಳದಲ್ಲಿ ಭೀಕರ ಜಲಪ್ರವಾಹ ಉಂಟಾದ ಬೆನ್ನಲ್ಲೇ ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, 20 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ಬ್ರೈಟ್ ಏಂಜಲ್ ಕ್ಯಾನ್ಯನ್ ಮತ್ತು ಫ್ಯಾಂಟಮ್ ರಾಂಚ್ ಪ್ರದೇಶವು ಹಠಾತ್ ಪ್ರವಾಹಕ್ಕೆ ತುತ್ತಾಗಿದೆ. ದೊಡ್ಡ ಬಂಡೆಗಳು, ಲೋಹದ ರಚನೆಗಳು ಮತ್ತು ಇತರ ಭಗ್ನಾವಶೇಷಗಳು ಪ್ರವಾಹದಲ್ಲಿ ಕೊಚ್ಚಿ ಬಂದಿದ್ದು, ಕೊಲೊರಾಡೋ ನದಿಗೆ ಸೇರಿವೆ ಎಂದು ರಾಷ್ಟ್ರೀಯ ಉದ್ಯಾನವನ ಸೇವೆ ಮಾಹಿತಿ ನೀಡಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲು ಅರಿಜೋನಾ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ನಾಪತ್ತೆಯಾದವರ ಬಗ್ಗೆ ಮತ್ತು ಆ ಪ್ರದೇಶದಲ್ಲಿದ್ದ ಪಾದಯಾತ್ರಿಕರ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸ್ಥಳೀಯರಿಗೆ ಸೇವೆ ತಿಳಿಸಿದೆ.
ಆ.೨೯ರ ಮಧ್ಯಾಹ್ನ 2:30 ರ ಸುಮಾರಿಗೆ ಕೊಲೊರಾಡೋ ನದಿಗೆ ಹರಿಯುವ ಬ್ರೈಟ್ ಏಂಜೆಲ್ ಕ್ರೀಕ್ನಲ್ಲಿ ಹಠಾತ್ ಪ್ರವಾಹ ಪ್ರಾರಂಭವಾಯಿತು. ಧಾರಾಕಾರವಾಗಿ ಹರಿದ ನೀರಿನಿಂದಾಗಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಪಾದಚಾರಿ ಸೇತುವೆಗಳು ಹಾನಿಗೊಳಗಾದವು. ಕಡಿದಾದ ಈ ಕಲ್ಲಿನ ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಸುಮಾರು ಅರ್ಧ ಇಂಚಿನಿಂದ 1 ಇಂಚಿನವರೆಗೆ ಮಳೆಯಾಗಿದೆ ಎಂದು ತಿಳಿದುಬಂದಿದೆ.