ಬೀಜಿಂಗ್, ಆ. 30 (DaijiworldNews/TA): ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ ಬೆನ್ನಲ್ಲೇ, ಚೀನಾ-ನೇಪಾಳ ಗಡಿಯಲ್ಲಿರುವ ಟಿಬೆಟ್ನ ಗೈರಾಂಗ್ ಭೂ ಬಂದರು ಪ್ರದೇಶದಲ್ಲಿ ಭಾರೀ ಭೂಕುಸಿತ ಮತ್ತು ಹಿಮಕುಸಿತ ಸಂಭವಿಸಿದೆ. ದುರಂತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 546 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಪ್ರಾದೇಶಿಕ ಸರ್ಕಾರ ಮಾಹಿತಿ ನೀಡಿದೆ.

ನಾಪತ್ತೆಯಾದವರ ಪೈಕಿ 23 ದೇಶಗಳ 261 ವಿದೇಶಿ ಪ್ರಜೆಗಳು ಸೇರಿದ್ದಾರೆ. ಇವರಲ್ಲಿ 49 ಮಂದಿ ಭಾರತೀಯ ಯಾತ್ರಿಕರು ನಾಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ನೇಪಾಳದ 104 ಮಂದಿ, ಲಾಟ್ವಿಯಾದ 33 ಮಂದಿ, ಅಮೆರಿಕದ 18 ಮಂದಿ ಹಾಗೂ ಬ್ರಿಟನ್ನ 15 ಮಂದಿ ಸೇರಿದಂತೆ ಹಲವು ದೇಶಗಳ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಭಾರತೀಯ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಗಳಲ್ಲಿ ಆತಂಕ ಮನೆಮಾಡಿದೆ. ಸಂತ್ರಸ್ತರ ಕುಟುಂಬಗಳಿಗಾಗಿ ಚೀನಾ ಸರ್ಕಾರ ಎರಡು 24 ಗಂಟೆಗಳ ಇಂಗ್ಲಿಷ್ ಸಹಾಯವಾಣಿ ಆರಂಭಿಸಿದೆ.
ದುರಂತದ ಗಂಭೀರತೆಯನ್ನು ಪರಿಗಣಿಸಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ತುರ್ತು ಸಭೆ ನಡೆಸಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸೂಚಿಸಿದ್ದಾರೆ. ಪ್ರಧಾನಿ ಲಿ ಕಿಯಾಂಗ್ ಅವರು ಗೈರಾಂಗ್ ಕೌಂಟಿಗೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ. ನೇಪಾಳದ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರಿಗೆ ಶೋಕ ಸಂದೇಶ ಕಳುಹಿಸಿರುವ ಷಿ ಜಿನ್ಪಿಂಗ್, ಗಡಿಯಾಚೆಗಿನ ರಕ್ಷಣಾ ಕಾರ್ಯಾಚರಣೆ ಹಾಗೂ ತುರ್ತು ನೆರವಿಗೆ ಚೀನಾ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.
ಗೈರಾಂಗ್ ಗಡಿ ಮಾರ್ಗವು ನೇಪಾಳ ಮತ್ತು ಟಿಬೆಟ್ ನಡುವಿನ ಪ್ರಮುಖ ವ್ಯಾಪಾರ ಸಂಪರ್ಕ ಮಾತ್ರವಲ್ಲದೆ, ಕೈಲಾಸ-ಮಾನಸ ಸರೋವರ ಯಾತ್ರೆಯ ಪ್ರಮುಖ ಮಾರ್ಗವೂ ಆಗಿದೆ. ದುರಂತ ಸಂಭವಿಸಿದ ಸಂದರ್ಭದಲ್ಲಿ ನೂರಾರು ವಿದೇಶಿ ಯಾತ್ರಿಕರು ಮತ್ತು ಪ್ರವಾಸಿಗರು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದರು. ಕಡಿದಾದ ಕಣಿವೆಗಳು, ತೀವ್ರ ಚಳಿ ಹಾಗೂ ಹಿಮ ಸರೋವರಗಳ ಅಸ್ಥಿರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಭಾರೀ ಸವಾಲು ಎದುರಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಕೃತಕ ಸರೋವರಗಳು ಒಡೆಯುವ ಆತಂಕವೂ ಇರುವುದರಿಂದ ರಕ್ಷಣಾ ತಂಡಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.