ಕೀವ್, ಆ. 29 (DaijiworldNews/AA): ಉಕ್ರೇನ್ನ ರಾಜಧಾನಿ ಕೀವ್ ಮೇಲೆ ರಾತ್ರಿ ಪೂರ್ತಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 42 ಜನ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ದಾಳಿಯ ತೀವ್ರತೆಗೆ ಮನೆಗಳು ಮತ್ತು ರೆಸ್ಟೋರೆಂಟ್ ಹೊತ್ತಿ ಉರಿದಿದೆ. ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ ೩೮೦ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ಟೈಮೂರ್ ಟ್ಕಾಚೆಂಕೊ ಅವರು ಟೆಲಿಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, "ರಷ್ಯಾ ದಾಳಿಯಿಂದ ಮೂಲಸೌಕರ್ಯಗಳಿಗೆ ಗಮನಾರ್ಹ ಹಾನಿಯುಂಟಾಗಿದೆ. ಇದರಲ್ಲಿ ವಸತಿ ಕಟ್ಟಡಗಳು, ಗೋಡೌನ್ಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳು ಸೇರಿವೆ. ಈ ಹಾನಿಗೆ ಕಾರಣರಾದವರು, ನಿರ್ಲಕ್ಷ್ಯ ತೋರಿದವರಿಗೆ ಶಿಕ್ಷೆ ವಿಧಿಸಲಾಗುವುದು. ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಕೀವ್ ಮೇಲೆ ನಿರಂತರ ವೈಮಾನಿಕ ದಾಳಿಗಳು ನಡೆಯುತ್ತಿವೆ. ರಷ್ಯಾದ ವಾಯುದಾಳಿಯಿಂದಾಗಿ ಉಕ್ರೇನ್ ನ ನಾಗರಿಕರು ತೀವ್ರ ಸಂಕಷ್ಟಕ್ಕೆ ಎದುರಿಸುವಂತಾಗಿದೆ.