ಬೀಜಿಂಗ್, ಆ. 28 (DaijiworldNews/AA): ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶುಕ್ರವಾರ ಮಧ್ಯಾಹ್ನ 5.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಸಿಚುವಾನ್ನ ಲಾಂಗ್ಚಾಂಗ್ ಸಮೀಪ ಭೂಮಿಯ ಮೇಲ್ಮೈಯಿಂದ ಕೇವಲ 13 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ ಮಾಹಿತಿ ನೀಡಿದೆ.
ಇನ್ನು ಮಣ್ಣು ಕುಸಿತದಿಂದ ನದಿಗೆ ಅಡ್ಡಲಾಗಿ ಸೃಷ್ಟಿಯಾಗಿದ್ದ ಕೃತಕ ಸರೋವರವು ಒಡೆದು ಮತ್ತೆ ಪ್ರವಾಹ ಉಂಟಾಗುವ ಆತಂಕ ಎದುರಾಗಿದೆ. ಹೀಗಾಗಿ ಟಿಬೆಟ್ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರವಾಹದ ಸಾಧ್ಯತೆ ಇರುವುದರಿಂದ ಸ್ಥಳದಲ್ಲಿದ್ದ ತುರ್ತು ರಕ್ಷಣಾ ಪಡೆಗಳನ್ನು ಕನಿಷ್ಠ 1 ಕಿಲೋಮೀಟರ್ ಹಿಂದಕ್ಕೆ ಸರಿಯುವಂತೆ ಚೀನಾ ಸರ್ಕಾರ ಆದೇಶಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಕಣಿವೆ ಪ್ರದೇಶಗಳಿಂದ 499 ಸ್ಥಳೀಯ ನಿವಾಸಿಗಳು ಹಾಗೂ 555 ಪ್ರವಾಸಿಗರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಗಿದೆ.