ಕಠ್ಮಂಡು, ಆ. 28 (DaijiworldNews/TA): ನೈಸರ್ಗಿಕ ವಿಕೋಪದ ನಡುವೆ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಘಟನೆ ನೇಪಾಳದಲ್ಲಿ ನಡೆದಿದೆ. ಭೀಕರ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಮೃತದೇಹವನ್ನು ನದಿಯಿಂದ ದಡಕ್ಕೆ ಎಳೆದು, ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಳವು ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಾರಾಯಣಿ ನದಿ ದಡದಲ್ಲಿ ಮೃತದೇಹದಿಂದ ಆಭರಣ ದೋಚುತ್ತಿರುವ 41 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ಆಧರಿಸಿ ಚಿತ್ವಾನ್ ಜಿಲ್ಲಾ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಾರಾಯಣಿ ನದಿಯಲ್ಲಿ ತೇಲಿಬಂದಿದ್ದ ಅಪರಿಚಿತ ಮಹಿಳೆಯ ಮೃತದೇಹವನ್ನು ಮರದ ಹಲಗೆಗಳ ನೆರವಿನಿಂದ ಹಾಗೂ ಆಕೆಯ ಕೂದಲನ್ನು ಹಿಡಿದು ದಡಕ್ಕೆ ಎಳೆಯಲಾಗಿದೆ ಎನ್ನಲಾಗಿದೆ. ಮೃತದೇಹ ದಡಕ್ಕೆ ಬಂದ ಬಳಿಕ ಇಬ್ಬರು ವ್ಯಕ್ತಿಗಳು ಆಕೆಯ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ಬಲವಂತವಾಗಿ ತೆಗೆದು ಜೇಬಿಗೆ ಹಾಕಿಕೊಂಡಿದ್ದಾರೆ. ಘಟನೆಯ ಸುತ್ತಮುತ್ತ ಹಲವರು ಇದ್ದರೂ, ಕೆಲವರು ನೆರವಿಗೆ ಧಾವಿಸುವ ಬದಲು ಮೊಬೈಲ್ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚಿತ್ವಾನ್ ಜಿಲ್ಲಾ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾದರು. ಭರತ್ಪುರ ಮೆಟ್ರೋಪಾಲಿಟನ್ ಸಿಟಿಯ ಪೋಖರಾ ಬಸ್ ಪಾರ್ಕ್ ಬಳಿ 25 ವರ್ಷದ ಮದನ್ ಗುರುಂಗ್ ಹಾಗೂ 38 ವರ್ಷದ ಉಮೇಶ್ ಚೌಧರಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ವಿಪತ್ತು ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನ ಹಾಗೂ ಲೂಟಿ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೇಪಾಳ ಪೊಲೀಸರು ಎಚ್ಚರಿಸಿದ್ದಾರೆ.
ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಹಿಮನದಿ ಸ್ಫೋಟ ಹಾಗೂ ಭೂಕುಸಿತದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ ಎನ್ನಲಾಗಿದ್ದು, ನಾಪತ್ತೆಯಾಗಿರುವ 1,400ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಚೀನಾದ ಗೈರೋಂಗ್ ಬಂದರು ಪ್ರದೇಶ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸುಮಾರು ಐದು ಅಡಿ ಆಳದ ಕೆಸರು ತುಂಬಿಕೊಂಡಿದ್ದು, ಹಲವು ಕಡೆ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ವಿಪತ್ತಿನಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ನದಿ ದಡಗಳಲ್ಲಿ ಮೃತದೇಹಗಳಿಗಾಗಿ ಕಣ್ಣೀರಿಡುತ್ತಿರುವ ಸಂದರ್ಭದಲ್ಲಿ, ಶವದಿಂದ ಆಭರಣ ಕಳವು ಮಾಡಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ನೈತಿಕ ಆಘಾತ ಮೂಡಿಸಿದೆ. ಇದೇ ವೇಳೆ, ವಿಕೋಪ ಪೀಡಿತ ಪ್ರದೇಶಗಳು ಮತ್ತು ನದಿ ದಡಗಳಲ್ಲಿ ಕಳ್ಳತನ ಹಾಗೂ ದರೋಡೆ ತಡೆಯಲು ನೇಪಾಳ ಸಶಸ್ತ್ರ ಪೊಲೀಸ್ ಪಡೆ (APF) ವಿಶೇಷ ರಾತ್ರಿ ಗಸ್ತು ಆರಂಭಿಸಿದೆ.