ಕಠ್ಮಂಡು, ಆ. 26 (DaijiworldNews/AK):ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಹಠಾತ್ ಪ್ರವಾಹಕ್ಕೆ ಸಿಲುಕಿ, ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಆಧ್ಯಾತ್ಮಿಕ ಗುರು ಸದ್ಗುರು ಅವರ ಇಶಾ ಫೌಂಡೇಶನ್ನ 77 ಸದಸ್ಯರು ಹಾಗೂ ಕೋಲ್ಕತ್ತಾದ 32 ಪ್ರವಾಸಿಗರ ಗುಂಪು ಸಂಪರ್ಕಕ್ಕೆ ಸಿಗುತ್ತಿಲ್ಲ. ಟಿಬೆಟ್ನ ಗೈರಾಂಗ್ (ಕ್ಸಿಗೇಜ್) ಮತ್ತು ನೇಪಾಳದ ರಸುವಾಗಧಿ ಗಡಿ ವಲಸೆ ಕಚೇರಿಗಳ ಮೇಲೆ ಏಕಾಏಕಿ ನುಗ್ಗಿದ ಬೃಹತ್ ಜಲರಾಶಿಯು ಕಟ್ಟಡಗಳನ್ನು ಮುಳುಗಿಸಿದ್ದು, ನೂರಾರು ಯಾತ್ರಿಕರು ಸಿಲುಕಿಕೊಂಡಿದ್ದಾರೆ.

ಕೈಲಾಸ ಯಾತ್ರೆ ಮುಗಿಸಿ ಗೈರಾಂಗ್ ವಲಸೆ ಕಚೇರಿಯಲ್ಲಿ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿದ್ದಾಗ ಭೀಕರ ಅಲೆಯೊಂದು ಇಡೀ ಪಟ್ಟಣ ಮತ್ತು ಕಚೇರಿಯನ್ನು ಆವರಿಸಿತು ಎಂದು ಸದ್ಗುರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರವಾಸದಲ್ಲಿದ್ದ 21 ಗುಂಪುಗಳ ಪೈಕಿ 495 ಮಂದಿ ಸುರಕ್ಷಿತವಾಗಿ ಮರಳಿದ್ದು, 743 ಜನರು ಟಿಬೆಟ್ನಲ್ಲಿ ಹಾಗೂ 145 ಜನರು ನೇಪಾಳ ಭಾಗದಲ್ಲಿದ್ದಾರೆ.
ಸಂಕಷ್ಟದಲ್ಲಿರುವ ಯಾತ್ರಿಕರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದ್ದು, ಯಾವುದೇ ಅಪಾಯವನ್ನು ಎದುರಿಸಿ ರಕ್ಷಣಾ ಕಾರ್ಯಾಚರಣೆಗೆ ಇಳಿಯಲು ತಮ್ಮ ಸ್ವಯಂಸೇವಕ ಪಡೆ ಸಿದ್ಧವಿದೆ ಎಂದು ಸದ್ಗುರು ಹೇಳಿದ್ದಾರೆ.
ಕೋಲ್ಕತ್ತಾದಿಂದ ಆಗಸ್ಟ್ 21 ರಂದು ತೆರಳಿದ್ದ 30 ಯಾತ್ರಿಕರು ಮತ್ತು ಇಬ್ಬರು ಟೂರ್ ಮ್ಯಾನೇಜರ್ಗಳಿದ್ದ ತಂಡವು ರಸುವಾಗಧಿ ಗಡಿಯಲ್ಲಿದ್ದಾಗ ಬೆಳಗ್ಗೆ 8.30 ರ ಸುಮಾರಿಗೆ ಸಂಪರ್ಕ ಕಡಿದುಕೊಂಡಿದೆ. ಸಂತ್ರಸ್ತ ಯಾತ್ರಿಕರ ಕುಟುಂಬಗಳಿಗಾಗಿ ಭವಾನಿ ಭವನ ಪೊಲೀಸ್ ಪ್ರಧಾನ ಕಚೇರಿಯಲ್ಲಿ 033-24793311 ಮತ್ತು 9147890181 ತುರ್ತು ಸಹಾಯವಾಣಿಗಳನ್ನು ಸಕ್ರಿಯಗೊಳಿಸಲಾಗಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಗಡಿ ಪ್ರದೇಶದಲ್ಲಿ 105 ಭಾರತೀಯರು ಸೇರಿದಂತೆ 291 ವಿದೇಶಿಯರು ಮತ್ತು 93 ನೇಪಾಳಿ ನಾಗರಿಕರು ನಾಪತ್ತೆಯಾಗಿದ್ದಾರೆ.