ವಾಷಿಂಗ್ಟನ್, 24 (DaijiworldNews/AK): ಟ್ರಂಪ್ ತಮ್ಮ ಸುಂಕ ಸಮರದ ನೀತಿಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಈಗ ಟ್ರಂಪ್ ಭಾರತ ಚೀನಾ ಮತ್ತು ಬ್ರಿಟನ್ ಸೇರಿದಂತೆ 60 ದೇಶಗಳ ಮೇಲೆ ಹೊಸ ಸುಂಕ ಹೇರಿದ್ದಾರೆ.

ಈ ದೇಶಗಳು ಬಲವಂತದ ಕಾರ್ಮಿಕ ಪದ್ಧತಿಯನ್ನು ತಡೆಯುವ ಕಾನೂನುಗಳನ್ನು ಸರಿಯಾಗಿ ಜಾರಿಗೆ ತಂದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಹೊಸ ನಿರ್ಧಾರದ ಪ್ರಕಾರ ಈ ದೇಶಗಳಿಂದ ಬರುವ ಆಮದು ಸರಕುಗಳ ಮೇಲೆ 10% ರಿಂದ 12.5% ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಹೊಸ ಕ್ರಮದ ನಂತರವೂ ಭಾರತದ ಮೇಲಿನ ಒಟ್ಟಾರೆ ಸುಂಕದ ಪ್ರಮಾಣ 10% ರಷ್ಟೇ ಇರಲಿದೆ.
‘ಯುಎಸ್-ಮೆಕ್ಸಿಕೋ-ಕೆನಡಾ ಒಪ್ಪಂದದ ವ್ಯಾಪ್ತಿಗೆ ಬರುವ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ಆಮದುಗಳಿಗೆ ಈ ಹೊಸ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಬಲವಂತದ ಶ್ರಮದ ಮೂಲಕ ತಯಾರಿಸಿದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಇಲ್ಲದ ದೇಶಗಳಿಗೆ (ಉದಾಹರಣೆಗೆ ಚೀನಾ, ಜಪಾನ್) 12.5% ತೆರಿಗೆ ಹೇರಲಾಗಿದೆ. ಇಂತಹ ಕಾನೂನುಗಳನ್ನು ಹೊಂದಿರುವ ಅಥವಾ ಜಾರಿಗೆ ತರಲು ಒಪ್ಪಿಕೊಂಡಿರುವ ಭಾರತ, ಶ್ರೀಲಂಕಾ ಮತ್ತು ಯುರೋಪಿಯನ್ ಯೂನಿಯನ್ನಂತಹ ದೇಶಗಳಿಗೆ 10% ರಷ್ಟು ತೆರಿಗೆ ವಿಧಿಸಲಾಗಿದೆ.
ಟ್ರಂಪ್ ಆಡಳಿತದ ಈ ಹೊಸ ಸುಂಕ ನೀತಿಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ಹಿಂದೆ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರ ‘ಲಿಬರೇಶನ್ ಡೇ’ ಸುಂಕಗಳನ್ನು ರದ್ದುಗೊಳಿಸಿದ ನಂತರ ತಾತ್ಕಾಲಿಕವಾಗಿ ವಿಧಿಸಲಾಗಿದ್ದ 10% ರಷ್ಟು ತೆರಿಗೆಯ ಗಡುವು ಮುಗಿಯುತ್ತಿದ್ದಂತೆಯೇ ಈ ಹೊಸ ನಿಯಮ ಬಂದಿದೆ.