ವಾಷಿಂಗ್ಟನ್, ಜು. 22 (DaijiworldNews/AA): 2028ರ ತನಕ ಜೆನೆರಿಕ್ ಔಷಧಿಗಳ ಮೇಲೆ ಯಾವುದೇ ಸುಂಕ ಇರುವುದಿಲ್ಲ. ಬಳಿಕ ಒಂದು ವರ್ಷ 100% ಮತ್ತು ನಂತರ 200% ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹೊಸ ಸುಂಕ ನೀತಿಯನ್ನು ಘೋಷಿಸಿದ್ದಾರೆ.

ಅಮೆರಿಕದಲ್ಲಿ ಔಷಧ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಟ್ರಂಪ್ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹಂತಹಂತವಾಗಿ ಸುಂಕ ಹೆಚ್ಚಿಸುವ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ತಮ್ಮ ಟ್ರುತ್ ಸೋಷಿಯಲ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಔಷಧ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ವಿದೇಶಗಳಿಂದ ಔಷಧ ಆಮದು ಮಾಡುವ ಬದಲು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ" ಎಂದು ತಿಳಿಸಿದ್ದಾರೆ.
"2026ರ ಆಗಸ್ಟ್ 1ರಿಂದ ಮುಂದಿನ ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಿಗಳ ಆಮದಿಗೆ ಯಾವುದೇ ಸುಂಕ ಇರುವುದಿಲ್ಲ. 2028ರಿಂದ ಒಂದು ವರ್ಷದವರೆಗೆ 100% ಸುಂಕ, ಅದರ ನಂತರ 200% ಸುಂಕ ಜಾರಿಗೆ ಬರಲಿದೆ. ನಿಗದಿತ ಅವಧಿಯೊಳಗೆ ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ಕಂಪನಿಗಳಿಗೆ ಈ ಹೆಚ್ಚುವರಿ ಸುಂಕ ದಂಡದಂತೆ ಕೆಲಸ ಮಾಡಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಹೊಸ ಔಷಧ ಉತ್ಪಾದನಾ ಘಟಕಗಳು ನಿರ್ಮಾಣವಾಗುತ್ತಿವೆ" ಎಂದು ಅವರು ಹೇಳಿದ್ದಾರೆ.