ಟೆಹ್ರಾನ್, ಜು. 21 (DaijiworldNews/TA): ಹೊಸ ಬದುಕಿನ ಕನಸುಗಳನ್ನು ಕಟ್ಟಿಕೊಂಡಿದ್ದ ಕೇರಳದ ಯುವ ನಾವಿಕನೊಬ್ಬ ರಷ್ಯಾ-ಉಕ್ರೇನ್ ಯುದ್ಧದ ದುರಂತಕ್ಕೆ ಬಲಿಯಾಗಿರುವ ಘಟನೆ ಮನಕಲಕುವಂತಿದೆ. ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, 26 ವರ್ಷದ ಅಖಿಲ್ ಜೋಯನ್, ಉಕ್ರೇನ್ನ ಒಡೆಸಾ ಬಂದರು ಸಮೀಪ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ನಾಲ್ವರು ಭಾರತೀಯರಲ್ಲಿ ಒಬ್ಬರಾಗಿದ್ದಾರೆ.

ಇತ್ತೀಚೆಗಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದ್ದು, ಇನ್ನೆರಡು ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಯ ಬಳಿಕ ಅಪಾಯಕಾರಿ ಸಮುದ್ರ ಉದ್ಯೋಗಕ್ಕೆ ವಿದಾಯ ಹೇಳಿ ಹೊಸ ಜೀವನ ಆರಂಭಿಸಬೇಕೆಂಬ ಕನಸನ್ನು ಅವರು ಹೊತ್ತಿದ್ದರು. ಆದರೆ, ನಿಶ್ಚಿತಾರ್ಥ ಮುಗಿಸಿ ಕರ್ತವ್ಯಕ್ಕೆ ಮರಳಿದ ಕೆಲವೇ ವಾರಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಖಿಲ್ ಕೇವಲ 19ನೇ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿಗೆ ಸೇರಿದ್ದರು. ಕಳೆದ ಆರು ವರ್ಷಗಳಿಂದ ವಿವಿಧ ಸರಕು ಸಾಗಣೆ ಹಡಗುಗಳಲ್ಲಿ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ದುಡಿಮೆಯಿಂದ ಕುಟುಂಬಕ್ಕಾಗಿ ಹೊಸ ಮನೆಯನ್ನು ಕಟ್ಟಿಸಿ, ಉತ್ತಮ ಭವಿಷ್ಯ ರೂಪಿಸುವ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದರು. ಅಖಿಲ್ ಅವರ ತಂದೆ ಜೋಯನ್ ಸ್ಥಳೀಯವಾಗಿ ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿದ್ದು, ತಾಯಿ ಸ್ಯಾಲಿ ವಿಮಾ ಏಜೆಂಟ್ ಆಗಿದ್ದಾರೆ. ಅಖಿಲ್ ದಂಪತಿಯ ಏಕೈಕ ಪುತ್ರರಾಗಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಪ್ಪಿಂಗ್ ಕಂಪನಿಯಿಂದ ಕುಟುಂಬಕ್ಕೆ ಬಂದ ಇ-ಮೇಲ್ ಮೂಲಕ ಅವರ ಸಾವಿನ ಸುದ್ದಿ ತಿಳಿದುಬಂದಿದೆ. ಕ್ಷಣಾರ್ಧದಲ್ಲೇ ಇಡೀ ಕುಟುಂಬದ ಸಂತೋಷ ದುಃಖವಾಗಿ ಮಾರ್ಪಟ್ಟಿದೆ. ತಮ್ಮ ಊರಿನಲ್ಲಿ ಅಖಿಲ್ ವಿನಯಶೀಲ, ಶಿಸ್ತಿನ ಹಾಗೂ ಎಲ್ಲರೊಂದಿಗೆ ಬೆರೆಯುವ ಯುವಕನಾಗಿ ಗುರುತಿಸಿಕೊಂಡಿದ್ದರು. ವಿದೇಶಿ ಮಾಧ್ಯಮಗಳ ವರದಿ ಪ್ರಕಾರ, ಪಶ್ಚಿಮ ಆಫ್ರಿಕಾ ರಾಷ್ಟ್ರದ ಧ್ವಜ ಹೊಂದಿದ್ದ 'ಎಂವಿ ಗೋಲ್ಡನ್ ಲಿಯೋ' ಸರಕು ಸಾಗಣೆ ಹಡಗು ಉಕ್ರೇನಿನ ಒಡೆಸಾ ಬಂದರಿನಿಂದ ಜೋಳವನ್ನು ಸಾಗಿಸುತ್ತಿತ್ತು. ಇದೇ ವೇಳೆ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಗೆ ಹಡಗು ಸಿಲುಕಿದೆ.
ಈ ದಾಳಿಯಲ್ಲಿ ನಾಲ್ವರು ಭಾರತೀಯರು, ಐವರು ಸಿರಿಯಾದ ನಾವಿಕರು ಸೇರಿದಂತೆ ಒಟ್ಟು 10 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಾಳಿಯಿಂದ ಹಡಗು ತೀವ್ರ ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅಖಿಲ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇರಳ ಮುಖ್ಯಮಂತ್ರಿ ಕಚೇರಿ, ನೋರ್ಕಾ ಇಲಾಖೆ, ರಷ್ಯಾದ ಕಾನ್ಸುಲೇಟ್ ಹಾಗೂ ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅಗತ್ಯ ರಾಜತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಪಾರ್ಥಿವ ಶರೀರವನ್ನು ಕೇರಳಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ಅಖಿಲ್ ಅವರ ಸಾವಿನ ಸುದ್ದಿ ತೀವ್ರ ಶೋಕದ ವಾತಾವರಣ ಸೃಷ್ಟಿಸಿದ್ದು, ಮದುವೆಯ ಕನಸು ಕಾಣುತ್ತಿದ್ದ ಯುವ ನಾವಿಕನ ಬದುಕು ಯುದ್ಧದ ದುರಂತದಲ್ಲಿ ಅಂತ್ಯಗೊಂಡಿರುವುದು ಕುಟುಂಬ ಹಾಗೂ ಗ್ರಾಮಸ್ಥರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.