ಟೆಹ್ರಾನ್, ಜು. 17 (DaijiworldNews/AA): ಅಮೆರಿಕದ ಹಲವು ಜೆಟ್ಗಳನ್ನು ನಾಶಪಡಿಸಿದ್ದೇವೆ. ಮತ್ತೊಂದಷ್ಟು ಜೆಟ್ಗಳಿಗೆ ಗಂಭೀರ ಹಾನಿ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ.

ಇಸ್ಲಾಮಿಕ್ ಗಣರಾಜ್ಯದ ಹಲವು ಸ್ಥಳಗಳ ಮೇಲೆ ರಾತ್ರಿಯಿಡೀ ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಜೋರ್ಡಾನ್ನಲ್ಲಿ ನೆಲೆಗೊಂಡಿದ್ದ ಹಲವಾರು ಅಮೆರಿಕದ ಮಿಲಿಟರಿ ವಿಮಾನಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ.
ಇರಾನ್ನ ಕ್ರಾಂತಿಕಾರಿ ಗಾರ್ಡ್ಗಳು, ಅಮೆರಿಕದ ಹಲವಾರು ಇಂಧನ ತುಂಬುವ ವಿಮಾನಗಳು ಮತ್ತು ಯುದ್ಧ ವಿಮಾನಗಳನ್ನು ನಾಶಪಡಿಸಿವೆ. ಇರಾನ್ಶಹರ್ನಲ್ಲಿ ಇರಾನಿನ ಸೈನಿಕರ ಹತ್ಯೆಗೆ ಪ್ರತೀಕಾರವಾಗಿ ಸಿರಿಯಾದ ಅಲ್-ತನ್ಫ್ನಲ್ಲಿರುವ ಅಮೆರಿಕದ ವಿಶೇಷ ಕಾರ್ಯಾಚರಣೆ ಕಮಾಂಡ್ ಕೇಂದ್ರದ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಐಆರ್ಜಿಸಿ ಮಾಹಿತಿ ನೀಡಿದೆ.