ವಾಷಿಂಗ್ಟನ್, ಜು. 14 (DaijiworldNews/AK): ಭಾರತೀಯ ಮೂಲದ ಗಗನಯಾತ್ರಿ ಹಾಗೂ ಯುಎಸ್ ಏರ್ಫೋರ್ಸ್ನ ಲೆಫ್ಟಿನೆಂಟ್ ಕರ್ನಲ್ ಆಗಿರುವ ಅನಿಲ್ ಮೆನನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಪ್ರಯಾಣಕ್ಕಾಗಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಈ ಮೂಲಕ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಹಾಗೂ ಶುಭಾಂಶು ಶುಕ್ಲಾ ಅವರ ನಂತರ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಭಾರತೀಯ ಮೂಲದ ಹೆಮ್ಮೆಯ ಗಗನಯಾತ್ರಿಗಳ ಸಾಲಿಗೆ ಅನಿಲ್ ಮೆನನ್ ಸೇರ್ಪಡೆಯಾಗಿದ್ದಾರೆ.

ಅನಿಲ್ ಮೆನನ್ ಮತ್ತು ಇತರೆ ಗಗನಯಾತ್ರಿಗಳನ್ನೊಳಗೊಂಡ ತಂಡವನ್ನು ಹೊತ್ತ ಸ್ಪೇಸ್ಎಕ್ಸ್ ರಾಕೆಟ್, ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 8 ತಿಂಗಳು ತಂಗಲಿರುವ ಈ ತಂಡವು ಅಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಗಳು ಹಾಗೂ ಸಂಶೋಧನೆಗಳನ್ನು ನಡೆಸಲಿದೆ.
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಅನಿಲ್ ಮೆನನ್ ಇಂದು ರಾತ್ರಿ ಇಬ್ಬರು ರಷ್ಯಾದ ಗಗನಯಾತ್ರಿಗಳೊಂದಿಗೆ ಕಜಕಿಸ್ತಾನ್ನ ಬೈಕನೂರ್ ಕಾಸ್ಮೋಡ್ರೋಮ್ನಿಂದ ಸೊಯುಜ್ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪಯಣ ಬೆಳೆಸಿದ್ದಾರೆ.
ತುರ್ತು ಚಿಕಿತ್ಸಾ ವೈದ್ಯಕೀಯ ಮತ್ತು ಏರೋಸ್ಪೇಸ್ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅನಿಲ್ ಮೆನನ್ ಅವರು, ಈ ದೀರ್ಘಾವಧಿಯ ಮಿಷನ್ನಲ್ಲಿ ಕೇವಲ ಸಂಶೋಧಕರಾಗಿ ಮಾತ್ರವಲ್ಲದೆ, ತಾವೇ ಸ್ವತಃ ಒಂದು ಸಂಶೋಧನಾ ವಸ್ತುವಾಗಿ ಭಾಗವಹಿಸಲಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯ ವಾತಾವರಣವು ಸುದೀರ್ಘ ಅವಧಿಯಲ್ಲಿ ಮಾನವನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅಮೂಲ್ಯವಾದ ಡೇಟಾವನ್ನು ಇವರ ಮೂಲಕ ಸಂಗ್ರಹಿಸಲಾಗುತ್ತದೆ.
ಅನಿಲ್ ಮೆನನ್ ಅವರು ಬಾಹ್ಯಾಕಾಶದಲ್ಲಿ ನಡೆಸಲಿರುವ ಕೆಲವು ಪ್ರಮುಖ ಸಂಶೋಧನೆಗಳೆಂದರೆ, ಎಐ (AI) ಆಧಾರಿತ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಭೂಮಿಯ ಮೇಲಿರುವ ವೈದ್ಯರ ನೇರ ಸಂಪರ್ಕವಿಲ್ಲದೆಯೂ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಸಂಕೀರ್ಣ ವೈದ್ಯಕೀಯ ತಪಾಸಣೆಗಳನ್ನು ಮಾಡಿಕೊಳ್ಳಲು ನೆರವಾಗುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಅವರು ಪರೀಕ್ಷಿಸಲಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಯಾವುದೇ ದೋಷಗಳಿಲ್ಲದ ಉತ್ತಮ ಗುಣಮಟ್ಟದ ಸೆಮಿಕಂಡಕ್ಟರ್ ಹರಳುಗಳನ್ನು ಉತ್ಪಾದಿಸಲು ಸಾಧ್ಯವೇ ಎಂಬ ಪ್ರಯೋಗವನ್ನು ಅವರು ನಡೆಸಲಿದ್ದಾರೆ. ಇದು ಯಶಸ್ವಿಯಾದರೆ ಭೂಮಿಯ ಮೇಲಿನ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟರ್ ಹಾಗೂ ಸುಧಾರಿತ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಕ್ರಾಂತಿ ಸೃಷ್ಟಿಸಲಿದೆ.
ಅನಿಲ್ ಮೆನನ್ ಅವರು ನಾಸಾದ ಗಗನಯಾತ್ರಿಗಳ ತಂಡವನ್ನು ಸೇರುವ ಮುನ್ನ, ಬಾಹ್ಯಾಕಾಶ ಯಾತ್ರಿಗಳ ಆರೋಗ್ಯದ ಉಸ್ತುವಾರಿ ನೋಡಿಕೊಳ್ಳುವ ‘ಫ್ಲೈಟ್ ಸರ್ಜನ್’ ಆಗಿ ಕಾರ್ಯನಿರ್ವಹಿಸಿದ್ದರು. ಎಲಾನ್ ಮಾಸ್ಕ್ ಅವರ ಸ್ಪೇಸ್ಎಕ್ಸ್ (SpaceX) ಸಂಸ್ಥೆಯ ಮೊದಲ ಫ್ಲೈಟ್ ಸರ್ಜನ್ ಕೂಡ ಇವರೇ ಆಗಿದ್ದರು. ಅನಿಲ್ ಮೆನನ್ ಅವರ ತಂದೆ ಭಾರತದ ಮೂಲದವರಾಗಿದ್ದು, ತಾಯಿ ಉಕ್ರೇನ್ ಮೂಲದವರಾಗಿದ್ದಾರೆ. ಇವರು ಅಮೆರಿಕದ ಮಿನ್ನೇಸೋಟದಲ್ಲಿ ಹುಟ್ಟಿ, ಬೆಳೆದರು. ಅನಿಲ್ ಮೆನನ್ ಅವರು ಕೇವಲ ಗಗನಯಾತ್ರಿಯಷ್ಟೇ ಅಲ್ಲದೆ, ವೃತ್ತಿಯಿಂದ ತುರ್ತು ಚಿಕಿತ್ಸಾ ವೈದ್ಯರಾಗಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದಿರುವ ಇವರು, ಸ್ಟ್ಯಾನ್ಫೋರ್ಡ್ ವೈದ್ಯಕೀಯ ಶಾಲೆಯಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ.