ಲಂಡನ್, ಜು. 14 (DaijiworldNews/TA): ಮನುಷ್ಯರು ಮಾದಕ ವಸ್ತುಗಳ ಸೇವನೆಯಿಂದ ಅಪಾಯಕ್ಕೆ ಸಿಲುಕುವ ಘಟನೆಗಳು ಸಾಮಾನ್ಯ. ಆದರೆ ಬ್ರಿಟನ್ನಲ್ಲಿ ನಡೆದಿರುವ ಒಂದು ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಕು ನಾಯಿಯೊಂದು ಗಾಂಜಾ ಸೇವಿಸಿದ ಬಳಿಕ ಅಮಲಿನಲ್ಲೇ ಬ್ರಿಟನ್ನ ಅತಿ ಎತ್ತರದ ಪರ್ವತ ಬೆನ್ ನೆವಿಸ್ ಏರಿ, ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದೆ. ತುರ್ತು ರಕ್ಷಣಾ ತಂಡದ ಸಮಯೋಚಿತ ಕಾರ್ಯಾಚರಣೆಯಿಂದ ನಾಯಿಯ ಪ್ರಾಣ ಉಳಿದಿದೆ.

ಸರ್ರೆ ನಿವಾಸಿ ಹಾಗೂ ಕುರಿ ತರಬೇತುದಾರರಾದ ಕ್ರಿಸ್ಟಿನಾ ಬ್ಲೂಮ್ ತಮ್ಮ ಐದು ವರ್ಷದ ಕಪ್ಪು ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿ 'ಟೋಕಿಯೋ' ಹಾಗೂ ಪುತ್ರ ಮ್ಯಾಗ್ನಸ್ ಜೊತೆ ಪರ್ವತಾರೋಹಣಕ್ಕೆ ತೆರಳಿದ್ದರು. ಪರ್ವತಾರೋಹಣದ ವೇಳೆ ದಾರಿಯಲ್ಲಿ ಬಿದ್ದಿದ್ದ ಗಾಂಜಾವನ್ನು ಟೋಕಿಯೋ ಸೇವಿಸಿದೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಅದರ ವರ್ತನೆ ಸಂಪೂರ್ಣ ಬದಲಾಗಿದ್ದು, ಅಮಲಿನಲ್ಲೇ ಓಡುತ್ತಾ ತನ್ನ ಮಾಲಕಿ ಹಾಗೂ ಇತರರನ್ನು ಹಿಂದಿಕ್ಕಿ ಪರ್ವತದ ಮೇಲ್ಭಾಗದವರೆಗೂ ತಲುಪಿದೆ. ಪರ್ವತದ ತುದಿಯತ್ತ ಸಾಗಿದ ಬಳಿಕ ಟೋಕಿಯೋನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದೆ. ಅದರ ಕಾಲುಗಳು ಶಕ್ತಿ ಕಳೆದುಕೊಂಡು ನಡೆಯಲು ಸಾಧ್ಯವಾಗಲಿಲ್ಲ. ಬಳಿಕ ಅದು ಅರೆಪ್ರಜ್ಞಾವಸ್ಥೆಗೆ ಜಾರಿದ್ದು, ಸಂಪೂರ್ಣ ಮಂಕಾಗಿ ನೆಲಕ್ಕುರುಳಿದೆ.
ಆ ವೇಳೆ ಪರ್ವತ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತಾಪಮಾನ ಕೇವಲ 5 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು. ಸುಮಾರು 25 ಕೆಜಿ ತೂಕದ ನಾಯಿಯನ್ನು ತಾಯಿ ಮತ್ತು ಮಗ ಇಬ್ಬರೂ ಕೆಳಕ್ಕೆ ಹೊತ್ತು ತರಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕ್ರಿಸ್ಟಿನಾ ಬ್ಲೂಮ್ ಅವರು ಲೋಚಬರ್ ಮೌಂಟನ್ ರೆಸ್ಕ್ಯೂ ಟೀಮ್ಗೆ ಮಾಹಿತಿ ನೀಡಿದರು. ಆ ವೇಳೆ ಇದೇ ತಂಡ ಮತ್ತೊಬ್ಬ ಗಾಯಗೊಂಡ ಪರ್ವತಾರೋಹಿಯನ್ನು ರಕ್ಷಿಸಿ ಕೆಳಕ್ಕೆ ಕರೆತರುತ್ತಿತ್ತು. ಆದರೂ ಕೂಡ ತಕ್ಷಣವೇ ಮತ್ತೊಂದು ಕಾರ್ಯಾಚರಣೆ ಆರಂಭಿಸಿದ ಸ್ವಯಂಸೇವಕರು, ಟೋಕಿಯೋವನ್ನು ವಿಶೇಷ ಸ್ಟ್ರೆಚ್ಚರ್ನಲ್ಲಿ ಮಲಗಿಸಿ ಮಳೆ, ಗಾಳಿ ಹಾಗೂ ಕಠಿಣ ಹಾದಿಯನ್ನು ಲೆಕ್ಕಿಸದೇ ಸುಮಾರು ಒಂದು ಗಂಟೆ ಕಾಲ ಹೊತ್ತು ಸುರಕ್ಷಿತವಾಗಿ ಕೆಳಕ್ಕೆ ಕರೆತಂದರು.
ನಂತರ ನಾಯಿಯನ್ನು ಫೋರ್ಟ್ ವಿಲಿಯಂನ ಕ್ರೌನ್ ವೆಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭದಲ್ಲಿ ವೈದ್ಯರು ಬೆನ್ನುಹುರಿಗೆ ಗಾಯವಾಗಿರಬಹುದು ಎಂದು ಶಂಕಿಸಿದ್ದರು. ಆದರೆ ನಂತರ ಹಿರಿಯ ಪಶುವೈದ್ಯರು ನಾಯಿಯಲ್ಲಿ ನರಮಂಡಲದ ವಿಷದ ಲಕ್ಷಣಗಳು ಕಾಣಿಸುತ್ತಿರುವುದನ್ನು ಗಮನಿಸಿದರು. ಈ ವೇಳೆ ವಿಷ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಿದಾಗ, ಟೋಕಿಯೋ ಗಾಂಜಾ ಸೇವಿಸಿರುವ ಸಾಧ್ಯತೆ ಇದೆ ಎಂಬುದು ದೃಢಪಟ್ಟಿತು. ನಾಯಿಯ ಬಾಯಿಯಿಂದ ಗಾಂಜಾದ ವಾಸನೆಯೂ ಬರುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರು ಕೂಡಲೇ ಸಕ್ರಿಯ ಚಾರ್ಕೋಲ್ ನೀಡಿ ಚಿಕಿತ್ಸೆ ಆರಂಭಿಸಿದರು. ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ನೀಡಿದ ಟೋಕಿಯೋ, ಮರುದಿನವೇ ಸಂಪೂರ್ಣ ಚೇತರಿಸಿಕೊಂಡು ಏನೂ ಆಗದಂತೆ ಓಡಾಡಲು ಆರಂಭಿಸಿತು. ಈ ಘಟನೆಯ ಬಳಿಕ ಮಾತನಾಡಿದ ಟೋಕಿಯೋ ಮಾಲಕಿ ಕ್ರಿಸ್ಟಿನಾ ಬ್ಲೂಮ್, "ನನ್ನ ನಾಯಿಯನ್ನು ನಾನು ಕಳೆದುಕೊಳ್ಳುತ್ತೇನೆ ಎಂಬ ಭಯ ಕಾಡಿತ್ತು. ರಕ್ಷಣಾ ತಂಡ ಮತ್ತು ವೈದ್ಯರು ಸಮಯಕ್ಕೆ ಸರಿಯಾಗಿ ಸ್ಪಂದಿಸದೇ ಇದ್ದರೆ ಟೋಕಿಯೋವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತಿತ್ತು" ಎಂದು ಭಾವುಕರಾಗಿ ಹೇಳಿದ್ದಾರೆ.
ಈ ಘಟನೆ ಬಳಿಕ ಪಶುವೈದ್ಯರು ಹಾಗೂ ರಕ್ಷಣಾ ತಂಡಗಳು ಸಾಕು ಪ್ರಾಣಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರವಾಸಿ ತಾಣಗಳು, ಬೆಟ್ಟ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮಾದಕ ವಸ್ತುಗಳನ್ನು ಎಸೆಯುವ ಸಾಧ್ಯತೆ ಇರುತ್ತದೆ. ಕುತೂಹಲದಿಂದ ನಾಯಿಗಳು ಅವುಗಳನ್ನು ತಿನ್ನುವ ಅಪಾಯವಿದ್ದು, ಪರ್ವತಾರೋಹಣ ಅಥವಾ ಪ್ರಕೃತಿ ವೀಕ್ಷಣೆಗೆ ಕರೆದುಕೊಂಡು ಹೋಗುವಾಗ ಸಾಕು ಪ್ರಾಣಿಗಳ ಮೇಲೆ ನಿರಂತರ ನಿಗಾ ಇರಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ. ಅದೃಷ್ಟವಶಾತ್, ಗಾಂಜಾ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಟೋಕಿಯೋ ಇದೀಗ ಸಂಪೂರ್ಣ ಗುಣಮುಖವಾಗಿದ್ದು, ಸಮಯೋಚಿತ ರಕ್ಷಣಾ ಕಾರ್ಯಾಚರಣೆ ಮತ್ತೊಮ್ಮೆ ಪ್ರಾಣ ಉಳಿಸಿದ ಉದಾಹರಣೆಯಾಗಿ ಈ ಘಟನೆ ಗಮನ ಸೆಳೆದಿದೆ.