ಬೀಜಿಂಗ್, ಜು. 10 (DaijiworldNews/TA): ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ನೀರು ಹಾವು ಸಾಕಣೆ ಕೇಂದ್ರಗಳಿಗೆ ನುಗ್ಗಿದ ಪರಿಣಾಮ, 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಪಂಜರಗಳಿಂದ ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಪ್ರವಾಹದಿಂದ ಪಾರಾಗಲು ಯತ್ನಿಸುತ್ತಿದ್ದ ಜನರು ಇದೀಗ ನೀರಿನಲ್ಲೇ ಈಜಾಡುತ್ತಿರುವ ವಿಷಕಾರಿ ಹಾವುಗಳ ಭೀತಿಯನ್ನೂ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವ ನಡುವೆಯೇ ಹಲವೆಡೆ ಹಾವುಗಳು ಮನೆಗಳು, ರಸ್ತೆಗಳು ಹಾಗೂ ಪ್ರವಾಹದ ನೀರಿನಲ್ಲಿ ಕಾಣಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹೆಂಗ್ಝೌ ನಗರದಲ್ಲಿ ಪ್ರವಾಹದಿಂದ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿದ ಘಟನೆ ನಡೆದಿದೆ. ಭಾರೀ ಪ್ರವಾಹದಿಂದ ರಸ್ತೆಗಳು ಸಂಪರ್ಕ ಕಳೆದುಕೊಂಡಿದ್ದರೆ, ಮತ್ತೊಂದೆಡೆ ಟ್ರಾಫಿಕ್ ದಟ್ಟಣೆ ಉಂಟಾಗಿದ್ದ ಕಾರಣ ಅವರನ್ನು ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಸಿಗುವ ಮುನ್ನವೇ ಮಹಿಳೆ ಮೃತಪಟ್ಟಿರುವುದಾಗಿ ಸ್ಥಳೀಯ ವರದಿಗಳು ತಿಳಿಸಿವೆ.
ಗುವಾಂಗ್ಕ್ಸಿ ಪ್ರಾಂತ್ಯವು ವಿಶ್ವದ ಅತಿದೊಡ್ಡ ವಾಣಿಜ್ಯ ಹಾವು ಸಾಕಣೆ ಕೇಂದ್ರಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕ ಚೀನೀ ಔಷಧ ತಯಾರಿಕೆ, ಚರ್ಮದ ಉತ್ಪನ್ನಗಳು ಹಾಗೂ ಆಹಾರ ಉದ್ದೇಶಕ್ಕಾಗಿ ಇಲ್ಲಿ ಸುಮಾರು 3 ಕೋಟಿ ಹಾವುಗಳನ್ನು ಸಾಕಲಾಗುತ್ತದೆ. ಪ್ರವಾಹದಿಂದ ಸಾಕಣೆ ಕೇಂದ್ರಗಳ ಗೋಡೆಗಳು ಕುಸಿದ ಪರಿಣಾಮ ಅನೇಕ ಹಾವುಗಳು ಹೊರಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದ ಹೊಡೆತಕ್ಕೆ ಸ್ಥಳೀಯ ಮೃಗಾಲಯದ ಗೋಡೆ ಕುಸಿದ ಪರಿಣಾಮ ಜೀಬ್ರಾಗಳು, ಹಂದಿಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರಾಣಿಗಳು ಹೊರಬಂದಿರುವುದಾಗಿ ವರದಿಯಾಗಿದೆ. ಕೆಲವು ಪ್ರಾಣಿಗಳನ್ನು ರಕ್ಷಿಸಲಾಗಿದ್ದು, ಉಳಿದವುಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಚೀನಾ ಸರ್ಕಾರ ವಿಶೇಷ ಹಾವು ಹಿಡಿಯುವ ತಜ್ಞರ ತಂಡಗಳನ್ನು ನಿಯೋಜಿಸಿದೆ. ಜೊತೆಗೆ 5,700ಕ್ಕೂ ಹೆಚ್ಚು ರಕ್ಷಣಾ ಬೋಟ್ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಹಾವಿನ ಕಡಿತಕ್ಕೊಳಗಾಗುವವರಿಗೆ ತ್ವರಿತ ಚಿಕಿತ್ಸೆ ನೀಡಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದ್ದು, ಆಂಟಿ-ವೆನಮ್ ಔಷಧಗಳನ್ನು ಸಿದ್ಧವಾಗಿರಿಸಲಾಗಿದೆ.
ಭೀಕರ ಪ್ರವಾಹ ಮತ್ತು ಬಿರುಗಾಳಿಯಿಂದ ಇದುವರೆಗೆ ಕನಿಷ್ಠ ಆರು ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 1.3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಮನೆಗಳು, ಕೃಷಿಭೂಮಿಗಳು, ಹಂದಿ ಸಾಕಣೆ ಕೇಂದ್ರಗಳು ಹಾಗೂ ಮಲ್ಲಿಗೆ ತೋಟಗಳಿಗೆ ಭಾರೀ ಹಾನಿಯಾಗಿದೆ. ಪ್ರವಾಹದ ಪರಿಣಾಮ ಗುವಾಂಗ್ಕ್ಸಿ ಪ್ರಾಂತ್ಯದ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ಮುಂದುವರಿದಿವೆ.