ಜಿಂಜಿಯಾಂಗ್, ಜು. 09 (DaijiworldNews/AA): ಶೂ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 28 ಜನರು ಸುಟ್ಟು ಕರಕಲಾದ ಘಟನೆ ಚೀನಾದ ಫುಜಿಯನ್ ಪ್ರಾಂತ್ಯದ ಜಿಂಜಿಯಾಂಗ್ ನಗರದಲ್ಲಿ ಗುರುವಾರ ಸಂಭವಿಸಿದೆ.

ಚೀನಾದ ಪ್ರಸಿದ್ಧ ಹ್ಯುಟೆಂಗ್ ಶೂ ಕಂಪನಿಗೆ ಸೇರಿದ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ಕಟ್ಟಡದೊಳಗೆ 237 ಕಾರ್ಮಿಕರು ಮತ್ತು ಇಬ್ಬರು ವಿಸಿಟರ್ಗಳು ಇದ್ದರು. 213 ಜನರನ್ನು ತುರ್ತು ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಆದರೆ, 28 ಜನರು ಒಳಗೇ ಸಜೀವ ದಹನವಾಗಿದ್ದಾರೆ.
ಘಟನೆಯ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. 'ಗಾಯಗೊಂಡವರಿಗೆ ಸಂಪೂರ್ಣ ವೈದ್ಯಕೀಯ ನೆರವು ನೀಡಲು ಮತ್ತು ವಿವರವಾದ ತನಿಖೆ ನಡೆಸುವಂತೆ' ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಆದೇಶಿಸಿದ್ದಾರೆ. ಫ್ಯಾಕ್ಟರಿ ಮಾಲೀಕ ಹಾಗೂ ಕಂಪನಿಯ ಇತರ ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಈ ವಿಡಿಯೋದಲ್ಲಿ ಬಹುಮಹಡಿ ಕಟ್ಟಡವೊಂದು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿರುವಾಗ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಕಂಡುಬಂದಿದೆ. ಜೊತೆಗೆ ಕಟ್ಟಡದ ಹಲವು ಮಹಡಿಗಳಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿದ್ದು, ಬೆಂಕಿ ಅತ್ಯಂತ ವೇಗವಾಗಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ. ಬೆಂಕಿ ನಂದಿಸಿದ ನಂತರದ ದೃಶ್ಯಗಳಲ್ಲಿ ಕಟ್ಟಡದ ಹೊರಗಿನ ಗೋಡೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದನ್ನು ಕಾಣಬಹುದಾಗಿದೆ.