ಓಮನ್, ಜೂ. 14 (DaijiworldNews/AA): ಓಮನ್ ಕರಾವಳಿಯಲ್ಲಿ ತಾಂತ್ರಿಕ ದೋಷದಿಂದಾಗಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ಅಮೆರಿಕ ಹಾಗೂ ಭಾರತೀಯ ನೌಕಾಪಡೆ ರಕ್ಷಿಸಿದೆ.

ಜೂನ್ 14ರ ಬೆಳಗ್ಗೆ ಒಮಾನ್ನ ರಾಸ್ ಅಲ್ ಹಡ್ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 14 ಭಾರತೀಯ ನಾವಿಕರಿದ್ದ ಹಡಗೊಂದು ತಾಂತ್ರಿಕ ದೋಷದಿಂದಾಗಿ ಮುಳುಗಲಾರಂಭಿಸಿತು. ಹಡಗು ಅಪಾಯದಲ್ಲಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಅಮೆರಿಕ ನೌಕಾಪಡೆಯು ತೀರದ ಅಧಿಕಾರಿಗಳಿಗೆ ಹಾಗೂ ಭಾರತೀಯ ನೌಕಾಪಡೆಗೆ ಸಂದೇಶ ರವಾನಿಸಿತು.
ಸಂದೇಶ ದೊರೆತ ತಕ್ಷಣ ಯುಎಸ್ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಪಿ-8 ಕಡಲ ಗಸ್ತು ವಿಮಾನವು ಹಡಗಿನ ಬಳಿ ಲೈಫ್ ರಾಫ್ಟ್ ಅನ್ನು ಇಳಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು.
ದೋಣಿಯಲ್ಲಿದ್ದ ಎಲ್ಲಾ 14 ಮಂದಿ ಕೂಡ ಭಾರತೀಯ ಪ್ರಜೆಗಳು ಅನ್ನೋದು ತಿಳಿದುಬಂದಿದೆ ಎಂದು ಒಮನ್ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇನ್ನು ಸಮುದ್ರದಲ್ಲಿ ಮುಳುಗಿದ ದೋಣಿಯು ಸೋಹಾರ್ನಿಂದ ಮುಂಬೈಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.