ಟೆಹ್ರಾನ್, ಜೂ. 14 (DaijiworldNews/TA): ಅಮೇರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಸಂಬಂಧಗಳಿಗೆ ತೆರೆ ಬೀಳುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಶ್ವತ ಶಾಂತಿ ಒಪ್ಪಂದದ ಕುರಿತು ಮಹತ್ವದ ವರ್ಚುವಲ್ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಹಲವು ರಾಷ್ಟ್ರಗಳ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಒಪ್ಪಂದದ ಪ್ರಕಾರ, ಎರಡೂ ರಾಷ್ಟ್ರಗಳು ಡಿಜಿಟಲ್ ಸಹಿಯ ಮೂಲಕ ಶಾಂತಿ ಒಪ್ಪಂದಕ್ಕೆ ಅಧಿಕೃತ ಮುದ್ರೆ ಒತ್ತಲಿದ್ದು, ಇದರಿಂದ ದೀರ್ಘಕಾಲದ ಉದ್ವಿಗ್ನತೆಗೆ ಅಂತ್ಯ ಹಾಡುವ ನಿರೀಕ್ಷೆ ಮೂಡಿದೆ. ಸಭೆಯಲ್ಲಿ ಕದನ ವಿರಾಮದ ಅವಧಿಯನ್ನು 60 ದಿನಗಳವರೆಗೆ ವಿಸ್ತರಿಸುವ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಯೂ ಇದೆ.
ಒಪ್ಪಂದದ ಭಾಗವಾಗಿ ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಎಲ್ಲ ರಾಷ್ಟ್ರಗಳ ಬಳಕೆಗೆ ಮುಕ್ತಗೊಳಿಸುವ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಜೊತೆಗೆ ಮುಂದಿನ ವಾರದಿಂದ ತಾಂತ್ರಿಕ ಮಟ್ಟದ ಮಾತುಕತೆಗಳು ಆರಂಭವಾಗಲಿದ್ದು, ಕದನ ವಿರಾಮದ ಅವಧಿಯಲ್ಲೇ ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಸಹ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಎಂದಿಗೂ ಅಣ್ವಸ್ತ್ರ ಹೊಂದಬಾರದು” ಎಂಬ ನಿಲುವನ್ನು ಪುನರುಚ್ಚರಿಸಿದ್ದು, ಒಪ್ಪಂದದಲ್ಲಿ ಅಣ್ವಸ್ತ್ರಗಳ ಸಂಶೋಧನೆ, ಅಭಿವೃದ್ಧಿ ಹಾಗೂ ಖರೀದಿಗೆ ನಿರ್ಬಂಧ ವಿಧಿಸುವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಬಹುದು ಎಂದು ಹೇಳಲಾಗುತ್ತಿದೆ. ಇರಾನ್ನಲ್ಲಿ ಯುರೇನಿಯಂ ಸಮೃದ್ಧೀಕರಣವನ್ನು ನಿಯಂತ್ರಿಸುವ ಹಾಗೂ ಪರಮಾಣು ತ್ಯಾಜ್ಯ ನಿರ್ವಹಣೆಗೆ ವಿಶೇಷ ವ್ಯವಸ್ಥೆ ರೂಪಿಸುವ ಪ್ರಸ್ತಾಪಗಳೂ ಚರ್ಚೆಯಲ್ಲಿವೆ.
ಆದಾಗ್ಯೂ, ಒಪ್ಪಂದದ ಬಗ್ಗೆ ಇರಾನ್ನಿಂದ ಇನ್ನೂ ಸ್ಪಷ್ಟವಾದ ಒಮ್ಮತ ವ್ಯಕ್ತವಾಗಿಲ್ಲ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಬಗಾಯಿ, ಅಮೆರಿಕ-ಇರಾನ್ ಒಪ್ಪಂದಕ್ಕೆ ತಕ್ಷಣವೇ ಸಹಿ ಹಾಕಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರಸ್ತುತ ಚರ್ಚೆಗಳಲ್ಲಿ ಪರಮಾಣು ಕಾರ್ಯಕ್ರಮದ ವಿಷಯ ಪ್ರಮುಖ ಅಜೆಂಡಾವಾಗಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ಒಪ್ಪಂದದ ಬಗ್ಗೆ ಇರಾನ್ ನಾಯಕತ್ವದೊಳಗೆ ಇನ್ನೂ ಭಿನ್ನಾಭಿಪ್ರಾಯಗಳಿರುವ ಸಾಧ್ಯತೆ ವ್ಯಕ್ತವಾಗಿದ್ದು, ಮುಂದಿನ ದಿನಗಳ ಮಾತುಕತೆಗಳು ಜಾಗತಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ನಿರೀಕ್ಷೆ ಮೂಡಿಸಿದೆ.