ನ್ಯೂಯಾರ್ಕ್, ಜೂ. 13 (DaijiworldNews/TA): ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್ಎಕ್ಸ್ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಬೆನ್ನಲ್ಲೇ ಸಂಸ್ಥಾಪಕ ಎಲೋನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಒಡೆಯ) ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ. ವಾಲ್ಸ್ಟ್ರೀಟ್ನಲ್ಲಿ ಸ್ಪೇಸ್ಎಕ್ಸ್ ಷೇರುಗಳು ಭರ್ಜರಿ ಏರಿಕೆ ಕಂಡ ಪರಿಣಾಮ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ 1 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ವರದಿಗಳು ತಿಳಿಸಿವೆ.

ಬ್ಲೂಮ್ಬರ್ಗ್ ಹಾಗೂ ಫೋರ್ಬ್ಸ್ ವರದಿಗಳ ಪ್ರಕಾರ, ಮಸ್ಕ್ ಅವರ ಸಂಪತ್ತು 1.05 ರಿಂದ 1.1 ಟ್ರಿಲಿಯನ್ ಡಾಲರ್ವರೆಗೆ ಏರಿಕೆಯಾಗಿದೆ. ಅವರ ಆಸ್ತಿಯಲ್ಲಿ ಸ್ಪೇಸ್ಎಕ್ಸ್ ಕಂಪನಿಯ ಸುಮಾರು 766 ಬಿಲಿಯನ್ ಡಾಲರ್ ಹಾಗೂ ಟೆಸ್ಲಾ ಕಂಪನಿಯ ಸುಮಾರು 280 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳು ಪ್ರಮುಖ ಪಾಲು ಹೊಂದಿವೆ.
ಸ್ಪೇಸ್ಎಕ್ಸ್ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ 75 ಬಿಲಿಯನ್ ಡಾಲರ್ (ಸುಮಾರು 6.2 ಲಕ್ಷ ಕೋಟಿ ರೂ.) ಬಂಡವಾಳ ಸಂಗ್ರಹಿಸುವ ಮೂಲಕ ವಿಶ್ವದಾಖಲೆ ಬರೆದಿದೆ. 2019ರಲ್ಲಿ ಸೌದಿ ಅರಾಮ್ಕೋ ಸಂಸ್ಥೆ ಐಪಿಒ ಮೂಲಕ ಸಂಗ್ರಹಿಸಿದ್ದ 29.4 ಬಿಲಿಯನ್ ಡಾಲರ್ ದಾಖಲೆಯನ್ನು ಇದು ಹಿಂದಿಕ್ಕಿದೆ.
ಕಂಪನಿಯು ಸುಮಾರು 55.5 ಕೋಟಿ ಷೇರುಗಳನ್ನು ಮಾರಾಟ ಮಾಡಿದ್ದು, ಪ್ರತಿ ಷೇರಿನ ಬೆಲೆಯನ್ನು 135 ಡಾಲರ್ ಎಂದು ನಿಗದಿಪಡಿಸಿತ್ತು. ಆದರೆ ಮಾರುಕಟ್ಟೆಗೆ ಲಿಸ್ಟ್ ಆದ ತಕ್ಷಣ ಹೂಡಿಕೆದಾರರಿಂದ ಭಾರೀ ಬೇಡಿಕೆ ವ್ಯಕ್ತವಾದ ಕಾರಣ ಷೇರು ಬೆಲೆ 150 ಡಾಲರ್ ಗಡಿ ದಾಟಿತು.
ಮಾರುಕಟ್ಟೆಯಲ್ಲಿ ಸ್ಪೇಸ್ಎಕ್ಸ್ ಷೇರುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಕಂಪನಿಗೆ 75 ಬಿಲಿಯನ್ ಡಾಲರ್ ಬಂಡವಾಳದ ಅವಶ್ಯಕತೆ ಇದ್ದರೂ ಹೂಡಿಕೆದಾರರು ಸುಮಾರು 250 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತಕ್ಕೆ ಬಿಡ್ ಸಲ್ಲಿಸಿರುವುದಾಗಿ ವರದಿಯಾಗಿದೆ.
ಐಪಿಒ ನಂತರ ಸ್ಪೇಸ್ಎಕ್ಸ್ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ (ಸುಮಾರು 165 ಲಕ್ಷ ಕೋಟಿ ರೂ.) ದಾಟಿದೆ. ಇದರೊಂದಿಗೆ ಕಂಪನಿಯು ಅಮೆರಿಕದ ಅತಿ ದೊಡ್ಡ ಸಾರ್ವಜನಿಕ ಕಂಪನಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಇದೇ ವೇಳೆ, ಕಂಪನಿಯಲ್ಲಿ ಆರಂಭಿಕ ದಿನಗಳಿಂದ ಕೆಲಸ ಮಾಡುತ್ತಿದ್ದ ಸುಮಾರು 4,400ಕ್ಕೂ ಹೆಚ್ಚು ಇಂಜಿನಿಯರ್ಗಳು, ವೆಲ್ಡರ್ಗಳು ಹಾಗೂ ಸಿಬ್ಬಂದಿ ಐಪಿಒ ಬಳಿಕ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ. ಕಂಪನಿಯಿಂದ ಸಂಬಳದ ಭಾಗವಾಗಿ ಪಡೆದಿದ್ದ ಷೇರುಗಳ ಮೌಲ್ಯ ಹಲವು ಪಟ್ಟು ಏರಿಕೆಯಾಗಿದೆ.
ಸ್ಪೇಸ್ಎಕ್ಸ್ ಸಂಸ್ಥೆಯು ಐಪಿಒ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಸ್ಟಾರ್ಶಿಪ್ ಯೋಜನೆ, ಸ್ಟಾರ್ಲಿಂಕ್ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯ ವಿಸ್ತರಣೆ ಹಾಗೂ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಬಳಸುವ ಸಾಧ್ಯತೆ ಇದೆ. ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಸ್ಟಾರ್ಶಿಪ್ ಯೋಜನೆ, ಜಾಗತಿಕ ಮಟ್ಟದಲ್ಲಿ ವೇಗದ ಇಂಟರ್ನೆಟ್ ಸೇವೆ ನೀಡುವ ಸ್ಟಾರ್ಲಿಂಕ್ ಹಾಗೂ ಎಲೋನ್ ಮಸ್ಕ್ ಅವರ xAI ಸಂಸ್ಥೆಯ ತಂತ್ರಜ್ಞಾನ ಅಭಿವೃದ್ಧಿಗೆ ಈ ಹೂಡಿಕೆ ನೆರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮಸ್ಕ್ ಅವರ ಸಂಪತ್ತು ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿರುವ ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರ ಸಂಪತ್ತಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಅವರ ಒಟ್ಟು ಆಸ್ತಿ ಮೌಲ್ಯ ಐರ್ಲೆಂಡ್ ಹಾಗೂ ಸ್ವೀಡನ್ ಸೇರಿದಂತೆ ಹಲವು ದೇಶಗಳ ವಾರ್ಷಿಕ ಜಿಡಿಪಿಗಿಂತಲೂ ಅಧಿಕವಾಗಿದೆ.