ಬ್ಯಾಂಕಾಕ್, ಜೂ. 12 (DaijiworldNews/AA): ಕಳೆದ ಮೂರು ವರ್ಷಗಳಿಂದ ಕೋಮಾದಲ್ಲಿದ್ದ ಥಾಯ್ಲೆಂಡ್ ರಾಜಮನೆತನದ ಹಿರಿಯ ರಾಜಕುಮಾರಿ ಬಜ್ರಕಿಟಿಯಾಭಾ ನರೇಂದಿರಾ ದೇಬ್ಯಾವತಿ (47) ಅವರು ಜೂನ್ 11ರ ಸಂಜೆ ಬ್ಯಾಂಕಾಕ್ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಜ್ರಕಿಟಿಯಾಭಾ ನರೇಂದಿರಾ ದೇಬ್ಯಾವತಿ ಅವರು 2022ರ ಡಿಸೆಂಬರ್ನಲ್ಲಿ ತಮ್ಮ ಸಾಕು ನಾಯಿಗಳೊಂದಿಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು. ಹೃದಯದಲ್ಲಿ ಉಂಟಾದ ಮೈಕೋಪ್ಲಾಸ್ಮಾ ಸೋಂಕಿನಿಂದ ಅವರಿಗೆ ತೀವ್ರ ಹೃದಯ ಬಡಿತದ ಸಮಸ್ಯೆ ಕಾಣಿಸಿಕೊಂಡಿತ್ತು.
ಕಳೆದ 3 ವರ್ಷಗಳಿಂದ ನಿರಂತರವಾಗಿ ರಾಜಕುಮಾರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರಿಗೆ ಪ್ರಜ್ಞೆ ಮರಳಿ ಬರಲಿಲ್ಲ. ಎಲ್ಲಾ ರೀತಿಯ ಚಿಕಿತ್ಸೆಯ ಹೊರತಾಗಿಯೂ ಅವರ ಆರೋಗ್ಯ ಸ್ಥಿತಿ ಕ್ರಮೇಣ ಕ್ಷೀಣಿಸುತ್ತಲೇ ಹೋಯಿತು. ಇದೀಗ ಅವರು ಬ್ಯಾಂಕಾಕ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಬಜ್ರಕಿಟಿಯಾಭಾ ಅವರನ್ನು ಥಾಯ್ಲೆಂಡ್ನಲ್ಲಿ 'ಲಾಯರ್ ಪ್ರಿನ್ಸೆಸ್' ಎಂದೇ ಕರೆಯಲಾಗುತ್ತಿತ್ತು. ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯಯಲ್ಲಿ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಬಳಿಕ ವಕೀಲರಾಗಿ ಸೇವೆ ಸಲ್ಲಿಸಿದ ಅವರು, ಕೆಲಕಾಲ ಯುನೈಟೆಡ್ ವಿಶ್ವಸಂಸ್ಥೆಯಲ್ಲಿ ಥಾಯ್ಲೆಂಡ್ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ 2012 ರಿಂದ 2014 ರವರೆಗೆ ಆಸ್ಟ್ರಿಯಾಗೆ ಥಾಯ್ಲೆಂಡ್ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.