ವಾಷಿಂಗ್ಟನ್, ಜೂ. 10 (DaijiworldNews/AK): ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮ ಮತ್ತು ಆರ್ಥಿಕ ದಿಗ್ಬಂಧನದ ಭಾರಿ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಇಂದು ಟ್ರೂತ್ ಸೋಷಿಯಲ್ ಖಾತೆಯಲ್ಲಿ ಸರಣಿ ಸಂದೇಶಗಳನ್ನು ಪ್ರಕಟಿಸಿರುವ ಅವರು, ಇರಾನ್ ವಿರುದ್ಧ ಅಮೆರಿಕ ಸೇನೆ ಯುದ್ಧ ಸಾರುವ ಮುನ್ಸೂಚನೆಗಳನ್ನು ಹೊರಹಾಕಿದ್ದಾರೆ. ಇಂದು ರಾತ್ರಿಯೇ ಅಮೆರಿಕ ಸೇನೆಯು ಇರಾನ್ ಮೇಲೆ ಅತ್ಯಂತ ಬಲವಾದ ದಾಳಿ ನಡೆಸಲಿದೆ ಎಂದು ಟ್ರಂಪ್ ನೇರವಾಗಿಯೇ ಘೋಷಿಸಿದ್ದಾರೆ.
ಇರಾನ್ ದೇಶದ ನೌಕಾಪಡೆ, ವಾಯುಪಡೆ ಮತ್ತು ಪ್ರಮುಖ ರಕ್ಷಣಾ ವ್ಯವಸ್ಥೆಗಳು ಈಗಾಗಲೇ ಧ್ವಂಸಗೊಂಡಿವೆ ಎಂದು ಪ್ರತಿಪಾದಿಸಿರುವ ಅವರು, ಮುಂದಿನ ಹಂತವಾಗಿ ಇರಾನ್ ಬೆನ್ನೆಲುಬನ್ನು ಮುರಿಯಲು ಸಜ್ಜಾಗಿದ್ದಾರೆ.
ಹಿಂದೆ ವೆನೆಜುವೆಲಾದಲ್ಲಿ ತಳೆದಿದ್ದ ಕಠಿಣ ನಿಲುವನ್ನೇ ಈಗ ಇರಾನ್ ಮೇಲೂ ಪ್ರಯೋಗಿಸಲು ಟ್ರಂಪ್ ಮುಂದಾಗಿದ್ದಾರೆ. ಇರಾನ್ ದೇಶದ ಅತ್ಯಂತ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನುಅಮೆರಿಕವು ಮುಂದಿನ ದಿನಗಳಲ್ಲಿ ತನ್ನ ಸಂಪೂರ್ಣ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ನ ಒಟ್ಟು ತೈಲ ಮತ್ತು ಗ್ಯಾಸ್ ಮಾರುಕಟ್ಟೆಯನ್ನು ಅಮೆರಿಕ ತನ್ನ ವಶಕ್ಕೆ ಪಡೆಯಲಿದೆ ಎಂದು ಅವರು ಬರೆದುಕೊಂಡಿದ್ದಾರೆ.