ಟೆಹ್ರಾನ್, ಜೂ. 11 (DaijiworldNews/TA): ಅಮೇರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಇತ್ತೀಚಿನ ಅಮೆರಿಕದ ಮಿಲಿಟರಿ ದಾಳಿಗಳಿಗೆ ಪ್ರತಿಯಾಗಿ ಇರಾನ್ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದಾಗಿ ಘೋಷಿಸಿದೆ. ಇರಾನ್ನ ಉನ್ನತ ಜಂಟಿ ಮಿಲಿಟರಿ ಕಮಾಂಡ್ ಈ ನಿರ್ಧಾರವನ್ನು ಪ್ರಕಟಿಸಿದ್ದು, ಜಲಸಂಧಿಯನ್ನು ದಾಟಲು ಪ್ರಯತ್ನಿಸುವ ಯಾವುದೇ ಹಡಗನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೂಡ ಈ ಕ್ರಮವನ್ನು ದೃಢಪಡಿಸಿದ್ದು, ತೈಲ ಟ್ಯಾಂಕರ್ಗಳು, ವಾಣಿಜ್ಯ ಹಡಗುಗಳು ಸೇರಿದಂತೆ ಎಲ್ಲಾ ಸಮುದ್ರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದೆ. ವಿಶ್ವದ ಕಚ್ಚಾತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯ ಬಂದ್ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಕೆ ಕಂಡಿವೆ.
ಬುಧವಾರ ಅಮೆರಿಕ ಇರಾನ್ ವಿರುದ್ಧ ಮತ್ತೊಂದು ಸರಣಿ ಮಿಲಿಟರಿ ಕಾರ್ಯಾಚರಣೆಗಳನ್ನು ಆರಂಭಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಈಗಾಗಲೇ ಹಲವು ತಿಂಗಳುಗಳಿಂದ ಮುಂದುವರಿಯುತ್ತಿರುವ ಸಂಘರ್ಷಕ್ಕೆ ಇದು ಹೊಸ ತಿರುವು ನೀಡಿದ್ದು, ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. ಇರಾನ್ನ ಈ ಘೋಷಣೆಯಿಂದ ಜಾಗತಿಕ ವ್ಯಾಪಾರ, ಇಂಧನ ಪೂರೈಕೆ ಮತ್ತು ಅಂತರರಾಷ್ಟ್ರೀಯ ಸಾಗಾಟ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.