ವಾಷಿಂಗ್ಟನ್, ಜೂ. 07 (DaijiworldNews/AA): ಭಾರತದ ಜನನ ಪ್ರಮಾಣ ಗಣನೀಯವಾಗಿ ಕುಸಿತವಾಗುತ್ತಿದೆ. ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವ ಜನಸಂಖ್ಯೆಗಿಂತ ಸಂತಾನೋತ್ಪತ್ತಿಯ ದರ ಕಡಿಮೆಯಾಗಿದೆ ಎಂದು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಭಾರತದಲ್ಲಿ ಜನನ ಪ್ರಮಾಣದ ದರ ಕುಸಿತ ಕಂಡಿದೆ. ಭಾರತದ ಜನಸಂಖ್ಯೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವುದಕ್ಕಿಂತಲೂ ಇಳಿಕೆ ಆಗಿದೆ. ಅದರಲ್ಲೂ ವಿಶೇಷವಾಗಿ ಭಾರತದ ವಿದ್ಯಾವಂತ ಕುಟುಂಬ ಅಥವಾ ಸಮುದಾಯಗಳಲ್ಲಿ ಈ ದರವು ಹಲವು ವರ್ಷಗಳ ಹಿಂದೆಯೇ ಕುಸಿದಿತ್ತು" ಎಂದಿದ್ದಾರೆ.
"ಇತ್ತೀಚಿನ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ವರದಿಯ ಪ್ರಕಾರ, ಭಾರತದ ಒಟ್ಟು ಸಂತಾನೋತ್ಪತ್ತಿ ಪ್ರಮಾಣ 2.1 ರಿಂದ 1.9ಕ್ಕೆ ಇಳಿಕೆ ಕಂಡಿದೆ. ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆ ಮುಂದಿನ ಪೀಳಿಗೆಗೆ ಸಮಾನವಾಗಿ ಮುಂದುವರಿಯಬೇಕಾದರೆ ಒಬ್ಬ ಮಹಿಳೆಗೆ ಸರಾಸರಿ 2.1 ಮಕ್ಕಳಾಗಬೇಕಾಗುತ್ತದೆ. ಇದನ್ನು ಬದಲಿ ಸಂತಾನೋತ್ಪತ್ತಿ ಮಟ್ಟ ಎನ್ನಲಾಗುತ್ತದೆ. ಆದರೆ ಈಗ ದೇಶದ ಸರಾಸರಿ ಈ ಮಟ್ಟಕ್ಕಿಂತ ಇಳಿಕೆಯಾಗಿರುವುರಿಂದ ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕುಂಠಿತಗೊಳ್ಳಲಿದೆ. ಸದ್ಯಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಜಾರ್ಖಂಡ್ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಜನನ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದೆ ಉಳಿದೆಲ್ಲಾ ರಾಜ್ಯಗಳಲ್ಲಿ ಇದು ತೀವ್ರವಾಗಿ ಕುಸಿತವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.