ನವದೆಹಲಿ, ಜೂ. 07 (DaijiworldNews/AA): ನಕಲಿ ಪಿಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಪಾರ್ಟ್ಟೈಮ್ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ 28 ವರ್ಷದ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಮೃತ ಯುವಕನನ್ನು ಅಂಶುಲ್ ಕುಂಚಾ ಎಂದು ಗುರುತಿಸಲಾಗಿದೆ.
ಅಂಶುಲ್ ಕುಂಚಾ ಅವರು ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶನಿವಾರ ರಾತ್ರಿ ಅಂಶುಲ್ ಅವರಿಗೆ ಪಿಜ್ಜಾ ಡೆಲಿವರಿ ಆರ್ಡರ್ ಬಂದಿತ್ತು. ಆರ್ಡರ್ ನೀಡಿದ್ದ ಸ್ಥಳಕ್ಕೆ ತಲುಪಿದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅಂಶುಲ್ ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂಶುಲ್ ಅವರ ಸಹೋದರಿ ತನ್ವಿ, ಇದು ಪೂರ್ವಯೋಜಿತ ಸಂಚು. ನಕಲಿ ಪಿಜ್ಜಾ ಆರ್ಡರ್ ಮೂಲಕ ಅಂಶುಲ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಅಂಶುಲ್ ಅವರ ಪಾರ್ಥಿವ ಶರೀರವನ್ನು ಶೀಘ್ರವೇ ಭಾರತಕ್ಕೆ ತರಬೇಕು. ಹತ್ಯೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.