ಅಮೇರಿಕಾ, ಮೇ. 29 (DaijiworldNews/TA): ಟೆಕ್ಸಾಸ್ನಲ್ಲಿ ರೋಮಾಂಚಕಾರಿ ಅನುಭವಕ್ಕಾಗಿ ತೆರಳಿದ್ದ ಪ್ರವಾಸಿಗರು ಕೆಲಕಾಲ ಭಯಾನಕ ಕ್ಷಣಗಳನ್ನು ಎದುರಿಸಿದ ಘಟನೆ ನಡೆದಿದೆ. ಮನರಂಜನಾ ಉದ್ಯಾನವನದಲ್ಲಿದ್ದ ರೋಲರ್ ಕೋಸ್ಟರ್ ರೈಡ್ ತುತ್ತತುದಿ ತಲುಪುತ್ತಿದ್ದಂತೆಯೇ ಏಕಾಏಕಿ ಕೆಟ್ಟು ನಿಂತ ಪರಿಣಾಮ, ಅದರಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಪ್ರವಾಸಿಗರು ಹಲವು ಮಹಡಿಗಳ ಎತ್ತರದಲ್ಲಿ ತಲೆಕೆಳಗಾಗಿ ತೂಗಾಡುವ ಸ್ಥಿತಿ ಎದುರಿಸಿದರು.

ಘಟನೆಯಿಂದ ರೈಡ್ನಲ್ಲಿದ್ದವರು ಆತಂಕಕ್ಕೀಡಾಗಿದ್ದು, ಕೆಲಕಾಲ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಆಕಾಶ ಮಧ್ಯೆ ಸಿಲುಕಿಕೊಂಡಿದ್ದರು. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ರೋಲರ್ ಕೋಸ್ಟರ್ ಇದ್ದ ಎತ್ತರವನ್ನು ಗಮನದಲ್ಲಿಟ್ಟುಕೊಂಡು ಅಗ್ನಿಶಾಮಕ ದಳದವರು ವಿಶೇಷ ಉದ್ದವಾದ ಏಣಿಯ ಟ್ರಕ್ ಅನ್ನು ಬಳಸಿದರು. ಏಣಿಯ ತುದಿಯಲ್ಲಿದ್ದ ಬಾಸ್ಕೆಟ್ ಸಹಾಯದಿಂದ ಸಿಬ್ಬಂದಿ ಒಬ್ಬೊಬ್ಬ ಪ್ರವಾಸಿಗರನ್ನು ಅತ್ಯಂತ ಎಚ್ಚರಿಕೆಯಿಂದ ಕೆಳಕ್ಕೆ ಇಳಿಸಿದರು. ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಎಲ್ಲ ಎಂಟು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಮಧ್ಯ ಆಕಾಶದಲ್ಲಿ ತಲೆಕೆಳಗಾಗಿ ಸಿಲುಕಿಕೊಂಡಿದ್ದ ಪ್ರವಾಸಿಗರು ಭಾರೀ ಆತಂಕ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಳಗಿಳಿದ ನಂತರ ಕೆಲವರು ಭಾವುಕರಾಗಿದ್ದು, ರಕ್ಷಣಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೋಲರ್ ಕೋಸ್ಟರ್ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರೋಲರ್ ಕೋಸ್ಟರ್ ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಹಳಿ ತಪ್ಪಿದ ಪರಿಣಾಮವೇ ಅಥವಾ ವಿದ್ಯುತ್ ವ್ಯತ್ಯಯದಿಂದ ಘಟನೆ ಸಂಭವಿಸಿತೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮನರಂಜನಾ ಉದ್ಯಾನವನ ಆಡಳಿತ ಘಟನೆಯ ಕುರಿತು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.