ಸೋಲ್, ಮೇ. 28 (DaijiworldNews/TA): ಚೀನಾದಿಂದ ಜೀವ ಪಣಕ್ಕಿಟ್ಟು ತಪ್ಪಿಸಿಕೊಂಡ ಮಾಜಿ ಪೊಲೀಸ್ ಅಧಿಕಾರಿ ಇದೀಗ ದಕ್ಷಿಣ ಕೊರಿಯಾದ ಪೊಲೀಸರ ವಶದಲ್ಲಿದ್ದಾರೆ. ಡಾಂಗ್ ಗುವಾಂಗ್ಪಿಂಗ್ ಎಂಬ ಈ ಅಧಿಕಾರಿ ಸಣ್ಣ ರಬ್ಬರ್ ದೋಣಿಯಲ್ಲಿ ಸುಮಾರು 30 ಗಂಟೆಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿ ದಕ್ಷಿಣ ಕೊರಿಯಾ ತಲುಪಿದ ಘಟನೆ ಅಚ್ಚರಿ ಮೂಡಿಸಿದೆ.

ವರದಿಗಳ ಪ್ರಕಾರ, ಡಾಂಗ್ ಅವರು ಚೀನಾದ ಶಾಂಡೊಂಗ್ ಪ್ರಾಂತ್ಯದ ವೈಹೈ ನಗರದಿಂದ ಸಮುದ್ರ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದರು. ಪಶ್ಚಿಮ ದಕ್ಷಿಣ ಕೊರಿಯಾದ ಟೇನ್ ಕೌಂಟಿ ಸಮೀಪಿಸುತ್ತಿದ್ದಾಗ ಅವರ ದೋಣಿಯ ಎಂಜಿನ್ ಏಕಾಏಕಿ ಕೆಟ್ಟು ಹೋಗಿದೆ. ಎರಡು ದಿನಗಳಿಂದ ನಿದ್ರೆಯಿಲ್ಲದೆ ಶಾರೀರಿಕವಾಗಿ ಕುಸಿದುಬಿದ್ದ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯ ಮೀನುಗಾರರು ಗಮನಿಸಿ ಕರಾವಳಿ ಕಾವಲು ಪಡೆಯಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ದಕ್ಷಿಣ ಕೊರಿಯಾ ಕರಾವಳಿ ಕಾವಲು ಪಡೆ ಡಾಂಗ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತು. ಬಳಿಕ ವಲಸೆ ನಿಯಮ ಉಲ್ಲಂಘನೆ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಡಾಂಗ್ ಗುವಾಂಗ್ಪಿಂಗ್ ಈ ಹಿಂದೆ ಕೂಡ ಹಲವು ಬಾರಿ ಚೀನಾದಿಂದ ಪಲಾಯನ ಮಾಡಲು ಯತ್ನಿಸಿದ್ದರು. 2015ರಲ್ಲಿ ಥೈಲ್ಯಾಂಡ್ಗೆ ಓಡಿಹೋಗಿದ್ದರೂ ಅಲ್ಲಿನ ಅಧಿಕಾರಿಗಳು ಅವರನ್ನು ಮರಳಿ ಚೀನಾಕ್ಕೆ ಗಡೀಪಾರು ಮಾಡಿದ್ದರು. ನಂತರ ವಿಯೆಟ್ನಾಂಗೆ ಅಕ್ರಮವಾಗಿ ಪ್ರವೇಶಿಸಿದಾಗಲೂ ಬಂಧನಕ್ಕೊಳಗಾಗಿ ಮತ್ತೆ ಚೀನಾಕ್ಕೆ ಕಳುಹಿಸಲ್ಪಟ್ಟಿದ್ದರು. ತೈವಾನ್ ತಲುಪಲು ಈಜುವ ಸಾಹಸವನ್ನೂ ಅವರು ಒಮ್ಮೆ ಮಾಡಿದ್ದರು ಎನ್ನಲಾಗಿದೆ. ಚೀನಾದಲ್ಲಿ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ಡಾಂಗ್ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು. ಪ್ರಸ್ತುತ ಅವರು ಕೆನಡಾದಲ್ಲಿ ಆಶ್ರಯ ಪಡೆದಿರುವ ತಮ್ಮ ಪತ್ನಿ ಮತ್ತು ಮಗಳನ್ನು ಸೇರಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಚೀನಾ-ಕೆನಡಾ ಕಾರ್ಯಕರ್ತೆ ಶೆಂಗ್ ಕ್ಸು ಸೇರಿದಂತೆ ಹಲವು ಮಂದಿ, ಡಾಂಗ್ ಅವರನ್ನು ಯಾವುದೇ ಕಾರಣಕ್ಕೂ ಚೀನಾಕ್ಕೆ ಮರಳಿ ಕಳುಹಿಸಬಾರದು ಎಂದು ದಕ್ಷಿಣ ಕೊರಿಯಾ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅವರನ್ನು ಚೀನಾಕ್ಕೆ ಗಡೀಪಾರು ಮಾಡಿದರೆ ಜೈಲು ಶಿಕ್ಷೆ, ಚಿತ್ರಹಿಂಸೆ ಅಥವಾ ಸಾವಿನ ಭೀತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಪ್ರಕರಣ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಸರ್ಕಾರಕ್ಕೆ ರಾಜಕೀಯವಾಗಿ ಸೂಕ್ಷ್ಮ ಸವಾಲಾಗಿ ಪರಿಣಮಿಸಿದೆ. ಚೀನಾದೊಂದಿಗೆ ಸಂಬಂಧ ಸುಧಾರಿಸಲು ಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಡಾಂಗ್ ಪ್ರಕರಣ ಮಹತ್ವ ಪಡೆದುಕೊಂಡಿದೆ.