ವಾಷಿಂಗ್ಟನ್, ಮೇ. 26 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಸೇನೆಯು ದಕ್ಷಿಣ ಇರಾನ್ನಲ್ಲಿ ಭೀಕರ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯ ಬಳಿ ಕ್ಷಿಪಣಿ ಉಡಾವಣಾ ತಾಣಗಳು ಮತ್ತು ಗಣಿಗಳನ್ನು ಇರಿಸಲು ಯತ್ನಿಸುತ್ತಿದ್ದ ಇರಾನಿನ ದೋಣಿಗಳನ್ನು ಗುರಿಯಾಗಿಸಿಕೊಂಡು ಈ ಸ್ವ-ರಕ್ಷಣಾ ದಾಳಿಗಳನ್ನು ನಡೆಸಿರುವುದಾಗಿ ಯುಎಸ್ ಸೇನೆ ಪ್ರಕಟಣೆ ಹೊರಡಿಸಿದೆ.

'ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಬೋಟ್ಗಳು ಗಣಿಗಳನ್ನು (ಜಲಬಾಂಬ್) ಇಡುತ್ತಿರುವುದನ್ನು ಗಮನಿಸಿತ್ತು. ಆ ನಂತರ ಅಮೆರಿಕ ಪಡೆ ತನ್ನ ಕಾರ್ಯಾಚರಣೆ ಶುರು ಮಾಡಿತು. ಈ ದಾಳಿಯಲ್ಲಿ ಮೈನ್ಸ್ ನಿಯೋಜಿಸುತ್ತಿದ್ದ 2 ದೋಣಿಗಳನ್ನ ನಾಶಪಡಿಸಲಾಯಿತು' ಎಂದು ಯುಎಸ್ ಸೇನೆ ತಿಳಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಮುಂಜಾನೆ ದಕ್ಷಿಣ ಇರಾನ್ನಲ್ಲಿರುವ ಇರಾನಿನ ಮಿಲಿಟರಿ ನೆಲೆಗಳು ಹಾಗೂ ಮೈನ್ಸ್ ನಿಯೋಜಿಸುತ್ತಿದ್ದ ಬೋಟ್ಗಳ ಮೇಲೆ ಅಮೆರಿಕ ಸೇನೆ ಬೃಹತ್ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. 'ಅಮೆರಿಕದ ಪಡೆಗಳು, ಯುದ್ಧನೌಕೆಗಳನ್ನು ರಕ್ಷಿಸಿಕೊಳ್ಳಲು ಆತ್ಮ ರಕ್ಷಣೆಯ ಭಾಗವಾಗಿ ನಡೆಸಿದ ದಾಳಿ ಇದಾಗಿದೆ' ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸಮರ್ಥನೆ ಮಾಡಿಕೊಂಡಿದೆ.
"ಇರಾನ್ನ ಪಡೆಗಳಿಂದ ಉಂಟಾಗುವ ಸಂಭವನೀಯ ಬೆದರಿಕೆಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ಅಮೆರಿಕದ ಪಡೆಗಳು ದಕ್ಷಿಣ ಇರಾನ್ನಲ್ಲಿ ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ" ಎಂದು ಅಮೆರಿಕದ ಕೇಂದ್ರ ಕಮಾಂಡ್ ವಕ್ತಾರ ತಿಮೋತಿ ಹಾಕಿನ್ಸ್ ತಿಳಿಸಿದ್ದಾರೆ.
"ಇರಾನ್ನ ಪಡೆಗಳು ಒಡ್ಡಿದ್ದ ಬೆದರಿಕೆಗಳನ್ನು ಯುಎಸ್ ಮಿಲಿಟರಿ ತಟಸ್ಥಗೊಳಿಸಿದೆ. ಪ್ರಸ್ತುತ ಕದನ ವಿರಾಮ ಸಮಯದಲ್ಲಿ ಯುಎಸ್ ಸಂಯಮ ಕಾಯ್ದುಕೊಳ್ಳುತ್ತಿದೆ. ಅದೇ ಸಮಯ ತನ್ನ ಪಡೆಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಹಿಂದೆ-ಮುಂದೆ ಯೋಚಿಸಲ್ಲ" ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಎಚ್ಚರಿಸಿದ್ದಾರೆ.