ವಾಷಿಂಗ್ಟನ್, ಏ. 30 (DaijiworldNews/AA): ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯಾಗಿ 250ನೇ ವಾರ್ಷಿಕೋತ್ಸವವನ್ನು ಜುಲೈನಲ್ಲಿ ಆಚರಿಸಲಿದೆ. ಈ ಹಿನ್ನಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ವಿಶೇಷ ಆವೃತ್ತಿಯ ಅಮೆರಿಕದ ಪಾಸ್ಪೋರ್ಟ್ಗಳಲ್ಲಿ ಸೇರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈನಲ್ಲಿ 250 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಸೀಮಿತ ಸಂಖ್ಯೆಯಲ್ಲಿ ವಿಶೇಷ ವಿನ್ಯಾಸದ ಪಾಸ್ಪೋರ್ಟ್ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಈ ವಿಶೇಷ ಪಾಸ್ಪೋರ್ಟ್ಗಳಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವನ್ನು ಸ್ವಾತಂತ್ರ್ಯ ಘೋಷಣೆ ಪತ್ರದ ಮೇಲೆ ಹಾಕಲಾಗುವುದು. ಅದರ ಕೆಳಗೆ ಅವರ ಸಹಿಯನ್ನು ಚಿನ್ನದ ಬಣ್ಣದಲ್ಲಿ ಮುದ್ರಿಸಲಾಗುವುದು. ಇನ್ನೊಂದು ಪುಟದಲ್ಲಿ ಅಮೆರಿಕದ ಸಂಸ್ಥಾಪಕ ಪಿತಾಮಹರ ಐತಿಹಾಸಿಕ ಚಿತ್ರವನ್ನು ಸಹ ಸೇರಿಸಲಾಗುವುದು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗಾಟ್ ತಿಳಿಸಿದ್ದಾರೆ.
ಈ ವಿಶೇಷ ಪಾಸ್ಪೋರ್ಟ್ಗಳು ಕೇವಲ ವಾಷಿಂಗ್ಟನ್ನಲ್ಲಿ ಮಾತ್ರ ಲಭ್ಯವಿರುತ್ತವೆ. ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ಪಾಸ್ಪೋರ್ಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸ್ಟಾಕ್ ಇರುವವರೆಗೆ ಮಾತ್ರ ಪಾಸ್ಪೋರ್ಟ್ಗಳು ದೊರೆಯುತ್ತವೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ.