ವಾಷಿಂಗ್ಟನ್, ಏ. 27 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಮೂರು ದಿನಗಳ ಕಾಲಾವಕಾಶ ನೀಡುವ ಜೊತೆಗೆ ಹೊಸ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಒಂದು ವೇಳೆ ಇರಾನ್ ತೈಲ ರಫ್ತು ಮಾಡಲು ಸಾಧ್ಯವಾಗದಿದ್ದರೆ, ತೈಲ ಸಂಗ್ರಹಣಾ ಸಾಮರ್ಥ್ಯ ಮೀರಿ ಪೈಪ್ಲೈನ್ಗಳ ಒಳಗೆ ಒತ್ತಡ ಹೆಚ್ಚಾಗಲಿದೆ. ಇದರಿಂದಾಗಿ ಪೈಪ್ಲೈನ್ಗಳು ಒಳಗಿನಿಂದಲೇ ಸ್ಫೋಟಗೊಳ್ಳಲಿವೆ" ಎಂದು ಹೇಳಿದ್ದಾರೆ.
"ಅಮೆರಿಕದ ನೌಕಾಪಡೆಯು ಇರಾನ್ನ ಬಂದರುಗಳನ್ನು ಸಂಪೂರ್ಣವಾಗಿ ದಿಗ್ಬಂಧನ ಮಾಡಿದ್ದರಿಂದ ಇರಾನ್ಗೆ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ತೈಲ ಹರಿವು ನಿಂತರೆ, ಪೈಪ್ಲೈನ್ಗಳಲ್ಲಿ ಅತಿಯಾದ ಒತ್ತಡ ಉಂಟಾಗಿ ಅವು ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ಹಾನಿಗೊಳಗಾಗುತ್ತವೆ" ಎಂದು ತಿಳಿಸಿದ್ದಾರೆ.
"ಈ ರೀತಿ ಪೈಪ್ಲೈನ್ಗಳು ಸ್ಫೋಟಗೊಂಡರೆ ಅಥವಾ ಹಾನಿಗೊಳಗಾದರೆ ಅದನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಇರಾನ್ ತನ್ನ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಭಾಗವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು" ಎಂದಿದ್ದಾರೆ.