ಇಸ್ಲಾಮಾಬಾದ್, ಏ. 27 (DaijiworldNews/TA): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇತ್ತೀಚಿನ ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಉಗ್ರರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ನಡುವೆ ಈ ಘಟನೆ ಮತ್ತಷ್ಟು ಆತಂಕ ಹುಟ್ಟಿಸಿದೆ.

ಆರಂಭಿಕ ಮಾಹಿತಿಯ ಪ್ರಕಾರ, ದಾಳಿಕೋರರು ಅಫ್ರಿದಿ ಮೇಲೆ ಅನೇಕ ಸುತ್ತು ಗುಂಡು ಹಾರಿಸಿದ್ದು, ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ. ಅಮೇರಿಕಾದಿಂದ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಾರ್ಯಾಚರಣೆಗಳಲ್ಲಿ ಅಫ್ರಿದಿ ಪ್ರಮುಖ ಪಾತ್ರವಹಿಸಿದ್ದ ಎಂದು ತಿಳಿದುಬಂದಿದೆ. ತನಿಖಾಧಿಕಾರಿಗಳ ಪ್ರಕಾರ, ಇದು ಪೂರ್ವನಿಯೋಜಿತ ‘ಟಾರ್ಗೆಟೆಡ್ ಕಿಲ್ಲಿಂಗ್’ ಆಗಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಉಗ್ರ ಸಂಘಟನೆಗಳ ನಾಯಕರ ಮೇಲೆ ದಾಳಿಗಳು ಹೆಚ್ಚಾಗಿವೆ. ಕಳೆದ ತಿಂಗಳು ಲಾಹೋರ್ನಲ್ಲಿ ಲಷ್ಕರ್ ಸ್ಥಾಪಕ ಸದಸ್ಯ ಅಮೀರ್ ಹಮ್ಜಾ ಗುಂಡೇಟಿಗೆ ಬಲಿಯಾಗಿದ್ದರೆ, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರ ತಾಹಿರ್ ಅನ್ವರ್ ಕೂಡ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಜೊತೆಗೆ, ರಿಯಾಸಿ ದಾಳಿಯ ಮಾಸ್ಟರ್ಮೈಂಡ್ ಕತಲ್ ಸಿಂಧಿ ಕಳೆದ ವರ್ಷ ಝೇಲಂನಲ್ಲಿ ಹತ್ಯೆಗೀಡಾಗಿದ್ದನು.
2023ರಿಂದ ಆರಂಭವಾದ ಈ ರೀತಿಯ ಹತ್ಯೆಗಳು 2026ರಲ್ಲಿ ಇನ್ನಷ್ಟು ತೀವ್ರಗೊಂಡಿವೆ. ಕೇವಲ ಈ ವರ್ಷದಲ್ಲೇ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಮಂದಿ ಉಗ್ರರನ್ನು ಲಾಹೋರ್, ಕರಾಚಿ ಮತ್ತು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ.
‘ಅಪರಿಚಿತ ಬಂದೂಕುಧಾರಿಗಳು’ ಯಾರು ಎಂಬುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಮುಖ ಉಗ್ರ ಸಂಚುಕೋರರಿಗೆ ಆಪ್ತರಾಗಿದ್ದ ನಾಯಕರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿರುವುದು, ಲಷ್ಕರ್ ಮತ್ತು ಜೈಶ್ ಸಂಘಟನೆಗಳಿಗೆ ಭಾರೀ ಹೊಡೆತ ನೀಡಿದೆ. ಪಾಕಿಸ್ತಾನದ ನೆಲದಲ್ಲೇ ತಮಗೆ ಸುರಕ್ಷತೆ ಇಲ್ಲ ಎಂಬ ಅರಿವು ಇದೀಗ ಉಗ್ರರಿಗೆ ಮೂಡುತ್ತಿರುವುದು ಗಮನಾರ್ಹವಾಗಿದೆ.