ವಾಷಿಂಗ್ಟನ್, ಏ. 27 (DaijiworldNews/TA): ಅಮೇರಿಕಾದ ರಾಜಧಾನಿ ವಾಷಿಂಗ್ಟನ್ನಲ್ಲಿರುವ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ನಡೆದ ಶ್ವೇತಭವನ ವರದಿಗಾರರ ಭೋಜನ ಕೂಟದ ವೇಳೆ ಭಾರೀ ದಾಳಿ ಸಂಚು ಭದ್ರತಾ ಪಡೆಗಳ ತ್ವರಿತ ಕ್ರಮದಿಂದ ವಿಫಲಗೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಸುಮಾರು 2,500 ಗಣ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ದಾಳಿ ನಡೆಸಲು ಕೇವಲ 10 ನಿಮಿಷ ಬಾಕಿ ಇರುವಾಗ ಆತ ತನ್ನ ಕುಟುಂಬದವರಿಗೆ ಟ್ರಂಪ್ ವಿರೋಧಿ ಪ್ರಣಾಳಿಕೆ ದಾಖಲೆಯನ್ನು ಕಳುಹಿಸಿದ್ದಾನೆ. ಅದರಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತದ ಹಿರಿಯ ಅಧಿಕಾರಿಗಳನ್ನು ಕ್ರಮಬದ್ಧವಾಗಿ ಹತ್ಯೆ ಮಾಡುವ ಪಟ್ಟಿಯನ್ನು ಸಿದ್ಧಪಡಿಸಿದ್ದನು.
ಈ ದಾಖಲೆಯನ್ನು ಗಮನಿಸಿದ ಆತನ ಸಹೋದರ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಳಿಕ ಸೀಕ್ರೆಟ್ ಸರ್ವಿಸ್ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಅಧ್ಯಕ್ಷರು ಇದ್ದ ಬಾಲ್ ರೂಂ ತಲುಪುವ ಮುನ್ನವೇ ಭದ್ರತಾ ತಪಾಸಣಾ ಕೇಂದ್ರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿತು.
ಅಲೆನ್ ತನ್ನ ಪ್ರಣಾಳಿಕೆಯಲ್ಲಿ ತಾನು ಹಲವಾರು ಶಸ್ತ್ರಾಸ್ತ್ರಗಳೊಂದಿಗೆ ಹೋಟೆಲ್ಗೆ ಪ್ರವೇಶಿಸಿದ್ದಾಗಿ ಹಾಗೂ ಗುರಿ ಸಾಧಿಸಲು ಯಾರನ್ನಾದರೂ ಕೊಲ್ಲಲು ಸಿದ್ಧನಿದ್ದಾಗಿ ಉಲ್ಲೇಖಿಸಿದ್ದಾನೆ. ಜೊತೆಗೆ, ಹೋಟೆಲ್ನ ಭದ್ರತಾ ವ್ಯವಸ್ಥೆಯನ್ನು ಟೀಕಿಸಿ, ತನ್ನ ಪ್ರವೇಶವನ್ನು ಯಾರೂ ಗಮನಿಸಿಲ್ಲವೆಂದು ಹೇಳಿಕೊಂಡಿದ್ದಾನೆ.
ಆರೋಪಿ ಒಂದು ದಿನ ಮುಂಚಿತವಾಗಿಯೇ ಹೋಟೆಲ್ಗೆ ಪ್ರವೇಶಿಸಿ ಸಂಚು ರೂಪಿಸಿದ್ದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಘಟನೆ ಅಮೇರಿಕಾದ ಉನ್ನತ ನಾಯಕತ್ವದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯತೆಯನ್ನು ಸೂಚಿಸಿದೆ.