ವಾಷಿಂಗ್ಟನ್, ಏ. 26 (DaijiworldNews/TA): ಅಮೇರಿಕಾದ ರಾಜಧಾನಿ ವಾಷಿಂಗ್ಟನ್ನಲ್ಲಿ ನಡೆದ ಶ್ವೇತಭವನದ ವಾರ್ಷಿಕ ಭೋಜನ ಕಾರ್ಯಕ್ರಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣಕ್ಕೂ ಮುನ್ನವೇ ಗುಂಡಿನ ಸದ್ದು ಕೇಳಿಬಂದ ಪರಿಣಾಮ ಸಭಾಂಗಣದಲ್ಲಿ ಗೊಂದಲ ಉಂಟಾಯಿತು.

ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಹಿರಿಯ ರಾಜತಾಂತ್ರಿಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಐದುರಿಂದ ಎಂಟು ಬಾರಿ ಗುಂಡು ಹಾರಿದ ಶಬ್ದ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ತಕ್ಷಣವೇ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ “ಕೆಳಗೆ ಬಾಗಿ, ದಾರಿ ಬಿಡಿ” ಎಂದು ಸೂಚಿಸುತ್ತಾ ಅಧ್ಯಕ್ಷ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.
ಆ ಸಂದರ್ಭದಲ್ಲಿ ಸಭಾಂಗಣದಲ್ಲಿದ್ದ ಅತಿಥಿಗಳು ಪ್ರಾಣಭೀತಿಯಿಂದ ಟೇಬಲ್ಗಳ ಕೆಳಗೆ ಅಡಗಿ ಕುಳಿತ ದೃಶ್ಯಗಳು ವರದಿಯಾಗಿವೆ. ಅದೃಷ್ಟವಶಾತ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಈ ಕುರಿತು ಶ್ವೇತಭವನ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಪೊಲೀಸರು ಶಂಕಿತ ಬಂದೂಕುಧಾರಿಯ ಉಪಸ್ಥಿತಿಯನ್ನು ದೃಢಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಈ ಘಟನೆ, 2024ರ ಜುಲೈ 13ರಂದು ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಟ್ರಂಪ್ ಮೇಲಿನ ಹತ್ಯೆ ಯತ್ನದ ನೆನಪುಗಳನ್ನು ಮತ್ತೆ ಮೂಡಿಸಿದೆ. ಆಗ ಗುಂಡು ಕಿವಿಗೆ ತಗುಲಿ ಟ್ರಂಪ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಈ ರೀತಿಯ ಘಟನೆಗಳು ಅಮೆರಿಕದ ಉನ್ನತ ನಾಯಕರ ಭದ್ರತೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದು, ದೇಶದ ಆಂತರಿಕ ಭದ್ರತಾ ವ್ಯವಸ್ಥೆಗೆ ಸವಾಲು ಹಾಕುತ್ತಿವೆ.