ಟೆಹ್ರಾನ್, ಏ. 25 (DaijiworldNews/TA): ಅಮೇರಿಕಾ ಮತ್ತು ಇಸ್ರೇಲ್ ಜೊತೆಗಿನ ಸುಮಾರು ಎರಡು ತಿಂಗಳ ಸಂಘರ್ಷದ ಬಳಿಕ ಇರಾನ್ ಮೊದಲ ಬಾರಿಗೆ ತನ್ನ ಪ್ರಮುಖ ಅಂತಾರಾಷ್ಟ್ರೀಯ ಗೇಟ್ವೇ ಆಗಿರುವ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸಿದೆ. ಈ ಬೆಳವಣಿಗೆ ದೇಶವು ಸಾಮಾನ್ಯ ಪರಿಸ್ಥಿತಿಗೆ ಮರಳುವತ್ತ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಟೆಹ್ರಾನ್ನಿಂದ ಇಸ್ತಾನ್ಬುಲ್, ಮಸ್ಕತ್ ಮತ್ತು ಮದೀನಾ ನಗರಗಳಿಗೆ ವಿಮಾನಗಳು ಹಾರಾಟ ಆರಂಭಿಸಿರುವುದು ಪ್ರಯಾಣಿಕರ ಸಂಚಾರಕ್ಕೆ ಹೊಸ ಉತ್ಸಾಹ ನೀಡಿದೆ. ಅಮೆರಿಕದೊಂದಿಗೆ ಕದನ ವಿರಾಮ ಜಾರಿಯಾದ ಬಳಿಕ ಇರಾನ್ ಈ ತಿಂಗಳ ಆರಂಭದಲ್ಲೇ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆಯಿತು. ಈ ಕ್ರಮವು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ತಾತ್ಕಾಲಿಕವಾಗಿ ಶಮನಗೊಳಿಸಿದೆ.
ಇದೇ ವೇಳೆ, ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಇಸ್ಲಾಮಾಬಾದ್ಗೆ ಭೇಟಿ ನೀಡಿ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದೊಂದಿಗೆ ಎರಡು ಹಂತದ ಮಾತುಕತೆಗಳನ್ನು ನಡೆಸಿದ್ದಾರೆ. ಈ ಚರ್ಚೆಗಳ ನಂತರವೇ ವಾಣಿಜ್ಯ ವಿಮಾನ ಹಾರಾಟ ಪುನರಾರಂಭವಾಗಿರುವುದು ಗಮನಾರ್ಹವಾಗಿದೆ. ಇರಾನ್ ನಿಯೋಗವು ಹಿರಿಯ ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಕೂಡ ಸಂವಾದ ಮುಂದುವರಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಕದನ ವಿರಾಮದ ಅವಧಿ ವಿಸ್ತರಣೆಯನ್ನು ಘೋಷಿಸಿದ ನಂತರ ಪಾಕಿಸ್ತಾನ ರಾಜತಾಂತ್ರಿಕತೆಗೆ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಪುನರಾರಂಭಿಸಲು ಪಾಕಿಸ್ತಾನ ಮಧ್ಯವರ್ತಿತ್ವ ವಹಿಸಲು ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳು ಇರಾನ್ನಲ್ಲಿ ಸಾಮಾನ್ಯ ಜೀವನ ಕ್ರಮೇಣ ಮರಳುತ್ತಿರುವ ಸೂಚನೆ ನೀಡುತ್ತಿದೆ.