ಮಾಸ್ಕೋ, ಏ. 22 (DaijiworldNews/TA): ರಷ್ಯಾದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಭೀತಿದಾಯಕ ಘಟನೆ ಸಂಭವಿಸಿದೆ. ಪ್ರದರ್ಶನದ ವೇಳೆ ಹುಲಿಯೊಂದು ಏಕಾಏಕಿ ಸೇಫ್ಟಿ ನೆಟ್ ದಾಟಿ ಪ್ರೇಕ್ಷಕರು ಕುಳಿತುಕೊಂಡಿದ್ದ ಭಾಗದತ್ತ ಹಾರಿದ ಪರಿಣಾಮ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಸರ್ಕಸ್ನಲ್ಲಿ ಮೂರು ಹುಲಿಗಳು ಹಾಗೂ ಒಬ್ಬ ತರಬೇತುದಾರ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸೇಫ್ಟಿ ನೆಟ್ ಹಠಾತ್ ಹರಿದುಬಿದ್ದಿದ್ದು, ಅದೇ ಸಮಯದಲ್ಲಿ ಒಂದು ಹುಲಿ ವೇದಿಕೆಯಿಂದ ಜಿಗಿದು ಪ್ರೇಕ್ಷಕರ ಪ್ರದೇಶಕ್ಕೆ ತಲುಪಿದೆ ಎಂದು ವಿಡಿಯೋ ದೃಶ್ಯಗಳಲ್ಲಿ ಕಾಣಿಸುತ್ತದೆ.
ಘಟನೆ ನಡೆದ ತಕ್ಷಣ ಪ್ರೇಕ್ಷಕರಿಗೆ ಶಾಂತವಾಗಿರಲು ಮತ್ತು ಓಡಾಡಬಾರದೆಂದು ಸೂಚನೆ ನೀಡಲಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ತರಬೇತುದಾರ ತಕ್ಷಣ ಕಾರ್ಯಪ್ರವೃತ್ತರಾಗಿ ಹುಲಿಯನ್ನು ಹಿಡಿದು ಮತ್ತೆ ವೇದಿಕೆಗೆ ಕರೆತರುವಲ್ಲಿ ಯಶಸ್ವಿಯಾದರು.
ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಸ್ನಲ್ಲಿ ಪ್ರಾಣಿಗಳ ಸುರಕ್ಷತೆ ಮತ್ತು ಪ್ರೇಕ್ಷಕರ ಭದ್ರತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಘಟನೆ ಬಳಿಕ ಸರ್ಕಸ್ ವ್ಯವಸ್ಥೆಯ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ಆರಂಭವಾಗಿದೆ.