ವಾಷಿಂಗ್ಟನ್, ಏ. 22 (DaijiworldNews/TA): ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹಾಗೂ ತೀವ್ರ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ರಾಜತಾಂತ್ರಿಕ ನಿರ್ಧಾರ ಕೈಗೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕದನ ವಿರಾಮವನ್ನು ವಿಸ್ತರಿಸಿರುವುದಾಗಿ ಅವರು ಘೋಷಿಸಿದ್ದಾರೆ.

ಅಮೇರಿಕಾ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿದ್ದ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ನಾಯಕರ ವಿಶೇಷ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ತಮ್ಮ “ಟ್ರುತ್ ಸೋಶಿಯಲ್” ವೇದಿಕೆಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಪಾಕಿಸ್ತಾನ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಗೆ ಹೆಚ್ಚುವರಿ ಸಮಯ ಕೋರಿದ್ದಾರೆ. ಇರಾನ್ ನಾಯಕರು ಏಕೀಕೃತ ಪ್ರಸ್ತಾವನೆ ನೀಡುವವರೆಗೆ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ತೈಲ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ವಿಚಾರದಲ್ಲೂ ಅಮೇರಿಕಾ ಕಠಿಣ ನಿಲುವು ತಳೆದಿದೆ. ಈ ಮಾರ್ಗದ ಮೇಲೆ ನಿಯಂತ್ರಣದಿಂದ ಇರಾನ್ ಆರ್ಥಿಕವಾಗಿ ದೊಡ್ಡ ಒತ್ತಡಕ್ಕೆ ಒಳಗಾಗಿದೆ ಎಂದು ಹೇಳಲಾಗುತ್ತಿದೆ.
ಇರಾನ್ ಈ ಜಲಸಂಧಿಯನ್ನು ಮುಚ್ಚುವುದಾಗಿ ಹೇಳಿದ್ದರೂ, ಟ್ರಂಪ್ ಇದನ್ನು ರಾಜಕೀಯ ಹೇಳಿಕೆ ಎಂದು ಕರೆದಿದ್ದಾರೆ. ಅಮೆರಿಕ ಈಗಾಗಲೇ ಈ ಮಾರ್ಗವನ್ನು ನಿಯಂತ್ರಣದಲ್ಲಿಟ್ಟಿರುವುದರಿಂದ ಇರಾನ್ ಅಸಹಾಯಕ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಹಂತದ ಎರಡು ವಾರಗಳ ಕದನ ವಿರಾಮ ಮುಕ್ತಾಯವಾದ ನಂತರ ಎರಡನೇ ಸುತ್ತಿನ ಮಾತುಕತೆಗಳು ಫಲ ನೀಡದೆ ಸ್ಥಗಿತಗೊಂಡಿದ್ದವು. ಆರಂಭದಲ್ಲಿ ಕದನ ವಿರಾಮ ವಿಸ್ತರಣೆ ನಿರಾಕರಿಸಿದ್ದ ಟ್ರಂಪ್, ಕೊನೆಯ ಕ್ಷಣದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ನಿರ್ಧಾರ ಬದಲಿಸಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಅಮೆರಿಕ ಸೇನೆಗೆ ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧರಾಗಿರಲು ಸೂಚನೆ ನೀಡಲಾಗಿದೆ. ಈ ಕದನ ವಿರಾಮ ತಾತ್ಕಾಲಿಕವಾಗಿದ್ದು, ಮುಂದಿನ ಹಂತ ಇರಾನ್ ನೀಡುವ ಪ್ರಸ್ತಾವನೆಯ ಮೇಲೆ ಅವಲಂಬಿತವಾಗಿರುತ್ತದೆ.