ಟೆಹ್ರಾನ್, ಏ. 19 (DaijiworldNews/TA): ಪಶ್ಚಿಮ ಏಷ್ಯಾದ ಅತ್ಯಂತ ಸೂಕ್ಷ್ಮ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಎರಡು ಭಾರತೀಯ ತೈಲ ಟ್ಯಾಂಕರ್ಗಳ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಭಾರತ ಸರ್ಕಾರವು ದೇಶದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಸಮನ್ಸ್ ನೀಡಿದೆ.

ಘಟನೆ ವೇಳೆ ಟ್ಯಾಂಕರ್ಗಳು ಕ್ವೆಶ್ಮ್ ದ್ವೀಪ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದವು. ಯಾವುದೇ ಪೂರ್ವ ಸೂಚನೆ ಇಲ್ಲದೇ ನಡೆದ ಈ ಗುಂಡಿನ ದಾಳಿಯ ನಂತರ ಟ್ಯಾಂಕರ್ಗಳು ಹಿಂದಿರುಗಿದವು ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಮೂಲಕ ಜಾಗತಿಕ ಹಡಗು ಸಂಚಾರಕ್ಕೆ ಅವಕಾಶ ನೀಡಿದ ನಂತರ ಸುಮಾರು 9 ಭಾರತೀಯ ಹಡಗುಗಳು ಈ ಮಾರ್ಗವನ್ನು ಬಳಸಿಕೊಂಡಿವೆ. ಆದರೆ ಇಂದಿನ ಘಟನೆ ವೇಳೆ ದಾಟುತ್ತಿದ್ದ ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಇರಾನ್ ರಾಯಭಾರ ಕಚೇರಿಯಲ್ಲಿ ಔಪಚಾರಿಕ ಪ್ರತಿಭಟನೆ ದಾಖಲಿಸಿದ್ದು, ಸ್ಪಷ್ಟನೆ ಕೇಳಿದೆ. ಸರ್ಕಾರಿ ಮೂಲಗಳ ಪ್ರಕಾರ, ದಾಳಿಯಲ್ಲಿ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಹಾಗೂ ಹಡಗಿಗೂ ಹಾನಿಯಾಗಿಲ್ಲ. ಪರಿಸ್ಥಿತಿಯನ್ನು ಶಿಪ್ಪಿಂಗ್ ಮಹಾನಿರ್ದೇಶಕರು ನಿಗಾದಲ್ಲಿ ಇಟ್ಟುಕೊಂಡಿದ್ದಾರೆ.
ಇದೇ ವೇಳೆ, ಭಾರತೀಯ ಧ್ವಜ ಹೊಂದಿರುವ ಇತರೆ ಹಡಗುಗಳ ಸುರಕ್ಷತೆಗೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ದಾಳಿ ನಿರ್ದಿಷ್ಟವಾಗಿ ಗುರಿಯಾಗಿಸಿ ನಡೆಸಿಲ್ಲ, ಆಕಸ್ಮಿಕವಾಗಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೇರಿಕದ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಒಮಾನ್ ಕರಾವಳಿಯಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನಡೆದಿದೆ. ಇರಾನ್ನ ಐಜಿಸಿಆರ್ (IRGC) ಗೆ ಸೇರಿದ ಎರಡು ಗನ್ಬೋಟ್ಗಳು ಟ್ಯಾಂಕರ್ ಸಮೀಪಕ್ಕೆ ಬಂದು ಗುಂಡು ಹಾರಿಸಿವೆ ಎಂದು ಟ್ಯಾಂಕರ್ನ ಕ್ಯಾಪ್ಟನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.