ಟೆಹ್ರಾನ್, ಏ. 18 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ತೈಲ ಟ್ಯಾಂಕರ್ಗಳ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿವೆ. ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಜಲಸಂಧಿಯಲ್ಲಿ ಹಡಗುಗಳು ಬರುತ್ತಿದ್ದಂತೆ ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಎರಡು ಗನ್ಬೋಟ್ಗಳು ಅವನ್ನು ಸಮೀಪಿಸಿವೆ. ಈ ವೇಳೆ ಯಾವುದೇ ರೇಡಿಯೋ ಸಂದೇಶ ನೀಡದೆ ಗುಂಡಿನ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ಬಳಿಕ ತೈಲ ಟ್ಯಾಂಕರ್ಗಳು ಅಲ್ಲಿಂದ ವಾಪಸ್ ಆಗಿವೆ ಎಂದು ಟ್ಯಾಂಕರ್ನ ಕ್ಯಾಪ್ಟನ್ ವರದಿ ಮಾಡಿದ್ದಾರೆ.
ಒಮನ್ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಅಮೆರಿಕ ಸರ್ಕಾರವು ತನ್ನ ಬದ್ಧತೆಯನ್ನು ತೋರಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ಮುಚ್ಚಿದ್ದೇವೆ ಎಂದು ನಾವು ಘೋಷಿಸುತ್ತೇವೆ. ಯಾವುದೇ ರಾಷ್ಟ್ರದ ಹಡಗು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ ಎಂದು ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿರುವ ವ್ಯಾಪಾರಿ ಹಡಗುಗಳಿಗೆ ಇರಾನಿನ ನೌಕಾಪಡೆಯು ರೇಡಿಯೋ ಸಂದೇಶಗಳನ್ನು ಕಳಿಸಿದೆ.