ಬೀಜಿಂಗ್, ಏ. 18 (DaijiworldNews/AA): ಪತಿಯೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಸಿಟ್ಟಿನಿಂದ ಅಪಾರ್ಟ್ಮೆಂಟ್ನ ಬಾಲ್ಕನಿಯಿಂದ 1.5 ಕೋಟಿ ರೂಪಾಯಿಯ ನೋಟುಗಳ ಕಂತೆಯನ್ನು ಎಸೆದ ಘಟನೆ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದೆ.

ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆದಿದೆ. ಜಗಳವಾಡಿ ಕೋಪಗೊಂಡ ಪತ್ನಿ ತನ್ನ ಕೈಯಲ್ಲಿದ್ದ ನೋಟುಗಳ ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಆಕೆ ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳನ್ನು ಎಸೆದಿದ್ದು ಅದರ ಒಟ್ಟು ಮೌಲ್ಯ ಸುಮಾರು 1.5 ಕೋಟಿ ರೂ.ಗಿಂತ ಹೆಚ್ಚಿತ್ತು.
ಮೇಲಿನಿಂದ ನೋಟುಗಳು ಬೀಳುತ್ತಿರುವುದನ್ನು ಕಂಡ ರಸ್ತೆಯಲ್ಲಿದ್ದ ಜನರು ಅದನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಹೀಗಾಗಿ ಸ್ಥಳದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಮದಿದ್ದಾರೆ. ಹಣವನ್ನು ಸಂಗ್ರಹಿಸಿದವರು ಅದನ್ನು ವಾಪಸ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನು ಚೀನಾದಲ್ಲಿ ಸಿಸಿಟಿವಿ ಕಣ್ಗಾವಲು ಇರುವುದರಿಂದ ಹಣವನ್ನು ಸಂಗ್ರಹಿಸಿದವರನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ. ಪರಿಣಾಮ ಹೆಚ್ಚಿನ ಹಣವು ಈಗಾಗಲೇ ಆ ಮಹಿಳೆಗೆ ದೊರೆತಿದೆ ಎಂದು ತಿಳಿದುಬಂದಿದೆ.