ವಾಷಿಂಗ್ಟನ್, ಏ. 17 (DaijiworldNews/TA): ವರ್ಜೀನಿಯಾದಲ್ಲಿ ನಡೆದ ದುರಂತ ಘಟನೆಯಲ್ಲಿ, ಮಾಜಿ ಲೆಫ್ಟಿನೆಂಟ್ ಗವರ್ನರ್ ಜಸ್ಟಿನ್ ಫೇರ್ಫ್ಯಾಕ್ಸ್ ತಮ್ಮ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ಮಾಹಿತಿಯಂತೆ, ಫೇರ್ಫ್ಯಾಕ್ಸ್ (47) ಅವರು ತಮ್ಮ ಪತ್ನಿ ಸೆರೆನಾ ಫೇರ್ಫ್ಯಾಕ್ಸ್ (49) ಅವರನ್ನು ಮನೆಯ ನೆಲಮಾಳಿಗೆಯಲ್ಲಿ ಗುಂಡಿಕ್ಕಿ ಕೊಂದು, ನಂತರ ಮೇಲ್ಮಹಡಿಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೆವಿನ್ ಡೇವಿಸ್ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ದಂಪತಿಗಳ ನಡುವೆ ವಿಚ್ಛೇದನ ಸಂಬಂಧಿತ ವಿಚಾರಗಳು ನಡೆಯುತ್ತಿದ್ದು, ಪತ್ನಿ ಕಳೆದ ವರ್ಷವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಫೇರ್ಫ್ಯಾಕ್ಸ್ ಮಾನಸಿಕ ಒತ್ತಡದಲ್ಲಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಜಸ್ಟಿನ್ ಫೇರ್ಫ್ಯಾಕ್ಸ್ 2017ರಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದು, ರಾಲ್ಫ್ ನಾರ್ಥಮ್ ಅವರ ಆಡಳಿತದಲ್ಲಿ ಪ್ರಮುಖ ರಾಜಕೀಯ ನಾಯಕರಾಗಿದ್ದರು. ಆದರೆ, ನಂತರ ಇಬ್ಬರು ಮಹಿಳೆಯರಿಂದ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಯಿತು.