ಇಸ್ಲಾಮಾಬಾದ್, ಏ. 13 (DaijiworldNews/AK):ಬಲೂಚಿಸ್ತಾನದ ನೆಲದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದ ಬಲೂಚ್ ಪ್ರತ್ಯೇಕತಾವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ.

ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ಗಸ್ತು ದೋಣಿಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ.
ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ದಂಗೆಕೋರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗಳಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
‘ಬಿಎಲ್ಎ’ ಹೊಣೆ ಮತ್ತು ಹೊಸ ಕಾರ್ಯತಂತ್ರ ನಿಷೇಧಿತ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಕೇವಲ ಹೊಣೆ ಹೊರುವುದು ಮಾತ್ರವಲ್ಲದೆ, ಪಾಕಿಸ್ತಾನಕ್ಕೆ ಅಪಾಯಕಾರಿ ಎಚ್ಚರಿಕೆಯನ್ನು ನೀಡಿದೆ.