ಇಸ್ಲಾಮಾಬಾದ್, ಏ. 12 (DaijiworldNews/AA): ಮಧ್ಯಪ್ರಾಚ್ಯ ಹಾಗೂ ಗಲ್ಫ್ನಲ್ಲಿ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೆರಿಕ ನಡುವೆ 21 ಗಂಟೆಗಳ ಕಾಲ ಪಾಕಿಸ್ತಾನದಲ್ಲಿ ನಡೆದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾನುವಾರ ತಿಳಿಸಿದ್ದಾರೆ.

ಬೆಳಗಿನ ಜಾವಕ್ಕೆ ಮುಂಚಿತವಾಗಿ ಮುಕ್ತಾಯಗೊಂಡ ಮೂರು ಸುತ್ತಿನ ಮಾತುಕತೆಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾನ್ಸ್, "ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಂಡಿಲ್ಲ. ಡೊನಾಲ್ಡ್ ಟ್ರಂಪ್ ಅವರು, ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ್ದರು. ದುರದೃಷ್ಟವಶಾತ್ ಯಾವುದೇ ಪ್ರಗತಿಯಾಗಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.
"ಮುಂಬರುವ ವರ್ಷಗಳಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ಅಮೆರಿಕ ಬಯಸಿದೆ. ಅವರ ಪರಮಾಣು ಕಾರ್ಯಕ್ರಮ ಮತ್ತು ಅವರು ಮೊದಲು ಹೊಂದಿದ್ದ ಪುಷ್ಟೀಕರಣ ಸೌಲಭ್ಯಗಳು ನಾಶವಾಗಿವೆ. ಆದರೆ, ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಅವರ ಬದ್ಧತೆ ಕಾಣುತ್ತಿಲ್ಲ" ಎಂದು ಹೇಳಿದರು.
"ಮಾತುಕತೆಯ ಫಲಿತಾಂಶ ಏನೇ ಇರಲಿ, ಅಮೆರಿಕ ಗೆದ್ದಿದೆ. ನಾವು ಆ ದೇಶವನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ. ಬಹುಶಃ ಅವರು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಳದಿರಬಹುದು. ಅಮೆರಿಕದ ದೃಷ್ಟಿಕೋನದಿಂದ ನನಗೆ ಅದು ಮುಖ್ಯವಲ್ಲ. ಅಮೆರಿಕವು ಇರಾನ್ ಅನ್ನು ಮಿಲಿಟರಿಯಾಗಿ ಸೋಲಿಸಿದೆ" ಎಂದರು.