ವಾಷಿಂಗ್ಟನ್, ಏ. 10 (DaijiworldNews/AK): ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿಯ ಸುತ್ತ ಈಗ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ವಿಶ್ವದ ಆರ್ಥಿಕತೆಯ ಮೇಲೆ ಆತಂಕದ ಛಾಯೆ ಮೂಡಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಹೊಸ ವಿವಾದವೊಂದು ಸ್ಫೋಟಗೊಂಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ಗಳ ಮೇಲೆ ಇರಾನ್ ಶುಲ್ಕ ವಿಧಿಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್ನ ಈ ನಡವಳಿಕೆಯನ್ನು ಅವಮಾನಕರ ಎಂದು ಕರೆದಿದ್ದಾರೆ.
ಇರಾನ್ ಜಲಸಂಧಿಯ ಮೂಲಕ ಹಾದುಹೋಗುವ ಟ್ಯಾಂಕರ್ಗಳಿಗೆ ಶುಲ್ಕ ವಿಧಿಸುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಹಾಗೆ ಮಾಡದಿರುವುದು ಉತ್ತಮ, ಒಂದು ವೇಳೆ ಮಾಡುತ್ತಿದ್ದರೆ ಈಗಲೇ ನಿಲ್ಲಿಸುವುದು ಅವರಿಗೆ ಉತ್ತಮ ಎಂದು ಟ್ರಂಪ್ ಎಚ್ಚರಿಸಿದ್ದಾರೆ.