ಟೆಹ್ರಾನ್, ಏ. 08 (DaijiworldNews/TA): ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಎರಡು ರಾಷ್ಟ್ರಗಳು ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯವನ್ನು ಘೋಷಿಸಿ, ಇರಾನ್ ಮೇಲಿನ ಸಂಭಾವ್ಯ ದಾಳಿಗಳನ್ನು ಮುಂದಿನ ಎರಡು ವಾರಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಅವರ ಸೂಚನೆ ಅನುಸಾರ ಅಮೇರಿಕಾ ಸೇನೆಯು ಇರಾನ್ ವಿರುದ್ಧದ ಎಲ್ಲಾ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಈ ಕದನವಿರಾಮ ಸಾಧ್ಯವಾಗಲು ಚೀನಾ ಮತ್ತು ಪಾಕಿಸ್ತಾನ ಮಹತ್ವದ ಪಾತ್ರ ವಹಿಸಿರುವುದಾಗಿ ಮೂಲಗಳು ತಿಳಿಸಿವೆ. ಮಾತುಕತೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಚೀನಾದ ಅಧಿಕಾರಿಗಳು ನಿರಂತರವಾಗಿ ಇರಾನ್ನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳ ಮೂಲಕ ಮಧ್ಯವರ್ತಿತ್ವ ನಡೆಸಿದ ಚೀನಾ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಶಾಂತ ಆದರೆ ಪರಿಣಾಮಕಾರಿ ಒತ್ತಡ ಹೇರಿದೆ ಎಂದು ವರದಿಗಳು ಸೂಚಿಸುತ್ತವೆ. ಅಮೆರಿಕಾ ಅಧ್ಯಕ್ಷ ಟ್ರಂಪ್, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರವೇ ಕದನವಿರಾಮ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಚೀನಾದ ವಿದೇಶಾಂಗ ಸಚಿವಾಲಯವು ಈ ವಿಷಯದ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಬೀಜಿಂಗ್ ತನ್ನ ಪ್ರಭಾವವನ್ನು ಪರೋಕ್ಷವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿದೆ. ವಾಷಿಂಗ್ಟನ್ನಲ್ಲಿರುವ ಚೀನೀ ರಾಯಭಾರ ಕಚೇರಿ, ಯುದ್ಧ ಆರಂಭವಾದ ಬಳಿಕದಿಂದಲೇ ಶಾಂತಿ ಸ್ಥಾಪನೆಗೆ ಚೀನಾ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.
ಮತ್ತೊಂದೆಡೆ, ಅಮೆರಿಕಾ ದಾಳಿಯ ಬೆದರಿಕೆಯಿಂದಾಗಿ ಇರಾನ್ನ ಪ್ರಮುಖ ಮೂಲಸೌಕರ್ಯಗಳಾದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ಅಪಾಯ ಮೂಡಿತ್ತು. ಆದರೆ ಚೀನಾದ ಕೊನೆಯ ಕ್ಷಣದ ಹಸ್ತಕ್ಷೇಪ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಇರಾನ್ ಎರಡು ವಾರಗಳ ಕದನವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ, ಹಲವು ದೇಶಗಳ ಸಮನ್ವಯ ಪ್ರಯತ್ನದಿಂದ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ಶಾಂತಿ ದೊರೆತಂತಾಗಿದೆ.